SK Home Ad
Home ಸುದ್ದಿ ದೇಶ ʼಉಪವಾಸ ಅಂತ್ಯ, ಹೊಣೆಗಾರಿಕೆ ಆರಂಭ’ : ವಾಂಗ್‌ಚುಕ್ ಪೋಸ್ಟ್!

ʼಉಪವಾಸ ಅಂತ್ಯ, ಹೊಣೆಗಾರಿಕೆ ಆರಂಭ’ : ವಾಂಗ್‌ಚುಕ್ ಪೋಸ್ಟ್!

0
97

ನವದೆಹಲಿ : ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂಬ ಬೇಡಿಕೆಯೊಂದಿಗೆ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರಿಂದ ಮಹತ್ವದ ಭರವಸೆ ದೊರೆತ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಉಪವಾಸ ಅಂತ್ಯಗೊಳಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಾಂಗ್‌ಚುಕ್, “ಹಸಿವಿನ ಅಂತ್ಯ… ಹೊಣೆಗಾರಿಕೆಯ ಆರಂಭ” ಎಂದು ಬರೆದು ತಮ್ಮ ಹೋರಾಟದ ಮುಂದಿನ ಹಂತ ಈಗ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಅವರ ಪ್ರಕಾರ, ಪರೀಕ್ಷಾ ವ್ಯವಸ್ಥೆಯಲ್ಲಿನ ಉತ್ತರದಾಯಿತ್ವ ಹಾಗೂ ಸುಧಾರಣೆ ಕುರಿತ ವಿಷಯವನ್ನು ಭಾರತೀಯ ಸಂಸತ್ತಿನಲ್ಲಿ ಚರ್ಚೆಗೆ ತರಲಾಗುವುದು ಎಂದು ಸರ್ಕಾರ ಮತ್ತು ವಿವಿಧ ಪಕ್ಷಗಳ ಸಂಸತ್ ಸದಸ್ಯರು ಭರವಸೆ ನೀಡಿದ್ದಾರೆ. ಜೊತೆಗೆ, ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪರಿಣಾಮ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆಯೂ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವಕರ ವಿರುದ್ಧ ಯಾವುದೇ ಕಾನೂನು ಕ್ರಮ ಅಥವಾ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂಬ ಭರವಸೆಯೂ ನೀಡಲಾಗಿದೆ ಎಂದು ವಾಂಗ್‌ಚುಕ್ ತಿಳಿಸಿದ್ದಾರೆ. ಇದೇ ಭರವಸೆಗಳ ಆಧಾರದ ಮೇಲೆ ಅವರು ತಮ್ಮ ಉಪವಾಸವನ್ನು ಅಂತ್ಯಗೊಳಿಸಿರುವುದಾಗಿ ಹೇಳಿದ್ದಾರೆ.

ಕಳೆದ ಕೆಲ ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹೋರಾಟವು ಕೇವಲ ಪರೀಕ್ಷಾ ಅಕ್ರಮಗಳ ವಿರುದ್ಧವಲ್ಲದೆ, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿರುದ್ಯೋಗ ಹಾಗೂ ಸರ್ಕಾರದ ಉತ್ತರದಾಯಿತ್ವದ ಕುರಿತ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯಗಳ (Fast Track Courts) ಸ್ಥಾಪನೆ ಹಾಗೂ ಕಠಿಣ ಕಾನೂನು ತರಲು ಸರ್ಕಾರ ಮುಂದಾಗಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ವಿದ್ಯಾರ್ಥಿ ಸಂಘಟನೆಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಮುಂದುವರಿಸಿವೆ.

ಉಪವಾಸ ಅಂತ್ಯಗೊಳಿಸಿದ ಬಳಿಕವೂ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ವಾಂಗ್‌ಚುಕ್ ಸ್ಪಷ್ಟ ಪಡಿಸಿದ್ದಾರೆ. ಈ ನಡುವೆ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳು ತಮ್ಮ ಬೇಡಿಕೆಗಳು ಸಂಪೂರ್ಣ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿವೆ.