SK Home Ad
Home ಸುದ್ದಿ ದೇಶ ಸಚಿವರು ಮಾತುಕತೆಗೆ ನಾವಿದ್ದಲ್ಲೇ ಬರಲಿ: ಕಾಕ್ರೋಚ್ ನಾಯಕರು

ಸಚಿವರು ಮಾತುಕತೆಗೆ ನಾವಿದ್ದಲ್ಲೇ ಬರಲಿ: ಕಾಕ್ರೋಚ್ ನಾಯಕರು

0
81

ನವದೆಹಲಿ: ನೀಟ್‌ ಪರೀಕ್ಷೆ ಅಕ್ರಮ ಪ್ರಕರಣ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ನೀಡಿದ್ದ ಆಹ್ವಾನವನ್ನು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರು ತಿರಸ್ಕರಿಸಿದ್ದಾರೆ.

ನಡ್ಡಾ ಅವರು ಸಿಜೆಪಿ ನಾಯಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಪ್ರತಿಭಟನೆ ಅಂತ್ಯಗೊಳಿಸುವ ಕುರಿತು ಚರ್ಚೆಗೆ ಕರೆ ನೀಡಿದ್ದರು. ಆದರೆ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಟಸ್ಥ ಸ್ಥಳವನ್ನು ನಿಗದಿಪಡಿಸಬೇಕು ಎಂಬ ತಮ್ಮ ಹಿಂದಿನ ನಿಲುವನ್ನೇ ಸಿಜೆಪಿ ಪುನರುಚ್ಚರಿಸಿದೆ.

ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ನಾವು ಯಾರ ಮನೆ ಅಥವಾ ಕಚೇರಿಗೆ ಹೋಗುವುದಿಲ್ಲ. ನಾವು ಜನತಾ ನ್ಯಾಯಾಲಯದಲ್ಲಿದ್ದೇವೆ. ಮಾತುಕತೆ ನಡೆಸಲು ಸರ್ಕಾರ ಬಯಸಿದರೆ, ಸಚಿವರೇ ಜನರ ಮಧ್ಯೆ ಬರಬೇಕು. ಜಂತರ್‌ ಮಂತರ್‌ನಲ್ಲಿಯೇ ಅಥವಾ ಪ್ರತಿಭಟನಾ ಸ್ಥಳದ ಸಮೀಪ ತಟಸ್ಥ ಸ್ಥಳದಲ್ಲಿ ಮಾತುಕತೆ ನಡೆಸಲಿ” ಎಂದು ಒತ್ತಾಯಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಜೆಪಿ ಜೂನ್‌ 20ರಿಂದ ಜಂತರ್‌ ಮಂತರ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದೆ.

ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಜೂನ್‌ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.