ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು 2.81 ಲಕ್ಷ ಮೌಲ್ಯದ ಕಳವು ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜೂ. 12ರಂದು ತಾಲೂಕಿನ ದೇವಿರಮ್ಮ ಅವರ ಮನೆಯಲ್ಲಿ ಕಳ್ಳರು ಬಾಗಿಲಿನ ಬೀಗ ಮುರಿದು ಪ್ರವೇಶಿಸಿ, ಗಾಡ್ರೇಜ್ ಬೀರುವಿನ ಲಾಕರ್ ಒಡೆದು 12 ಗ್ರಾಂ ಚಿನ್ನದ ಆಭರಣ, 150 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿದ್ದರು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ಜುಲೈ 9ರಂದು ಕಡ್ಳೆಬಾಳು ಗ್ರಾಮದ ಕರಿಬಸವೇಶ್ವರ ಅವರ ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರು ನುಗ್ಗಿ, ಗಾಡ್ರೇಜ್ ಬೀರುವಿನ ಲಾಕರ್ ಒಡೆದು ಚಿನ್ನದ ಆಭರಣಗಳು ಹಾಗೂ ನಗದು ಹಣ ಕಳವು ಮಾಡಿದ್ದರು. ಈ ಸಂಬಂಧವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆಗಾಗಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿಎಸ್ಪಿ ಬಿ.ಎಸ್. ಬಸವರಾಜ್ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಟಿ. ಅಣ್ಣಯ್ಯ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಮೊದಲ ಪ್ರಕರಣದಲ್ಲಿ ಭದ್ರಾವತಿ ತಾಲೂಕಿನ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ (50) ಹಾಗೂ ಕುಮಾರ ಅಲಿಯಾಸ್ ವಗ್ಗ ಕುಮಾರ (36) ಅವರನ್ನು ಬಂಧಿಸಿ, ಅವರಿಂದ 1.08 ಲಕ್ಷ ಮೌಲ್ಯದ ಕಳವು ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಎರಡನೇ ಪ್ರಕರಣದಲ್ಲಿ ದಾವಣಗೆರೆ ತಾಲೂಕಿನ ದೇವೇಂದ್ರ ಅಲಿಯಾಸ್ ದೇವಾ (27) ಎಂಬಾತನನ್ನು ಬಂಧಿಸಿ, 1.73 ಲಕ್ಷ ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಪ್ರಕರಣಗಳಲ್ಲಿ ಒಟ್ಟು 2.81 ಲಕ್ಷ ಮೌಲ್ಯದ ಕಳವು ಮಾಲು ಪತ್ತೆಯಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





















