ನವದೆಹಲಿ: ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಸುಮಾರು 6 ಲಕ್ಷ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಪರೀಕ್ಷೆ ರದ್ದಾದ ಎರಡು ವಾರಗಳಾದರೂ ಹೊಸ ದಿನಾಂಕದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಇಂದು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ಆದರೆ ವರ್ಷಗಳ ಕಾಲ ಶ್ರಮಪಟ್ಟು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡ ಅಭ್ಯರ್ಥಿಗಳೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ನ್ಯಾಯವಲ್ಲ,” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವಶ
ರಾಹುಲ್ ಗಾಂಧಿ ಪ್ರಕಾರ, ಈ ಅಭ್ಯರ್ಥಿಗಳೇ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಶಿಕ್ಷಕರು. ಅವರು ಹಲವು ವರ್ಷಗಳಿಂದ ಪರೀಕ್ಷೆಗೆ ಸಿದ್ಧತೆ ನಡೆಸಿ, ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ದೂರದ ಕೇಂದ್ರಗಳಿಗೆ ಪ್ರಯಾಣಿಸಿ ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಆದರೆ ಪೇಪರ್ ಲೀಕ್‌ನಿಂದಾಗಿ ಅವರ ಶ್ರಮಕ್ಕೆ ಧಕ್ಕೆಯಾಗಿದೆ.
ಸರ್ಕಾರಕ್ಕೆ ಮೂರು ಪ್ರಮುಖ ಬೇಡಿಕೆ : ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೆ ರಾಹುಲ್ ಗಾಂಧಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನ ಗೋಡೆ ಹಾರಿ ಮೂವರು ಕೈದಿಗಳು ಎಸ್ಕೇಪ್
- ಸಮಯ ನಿಗದಿ: TET ಪರೀಕ್ಷೆಯ ಹೊಸ ದಿನಾಂಕವನ್ನು ತಕ್ಷಣವೇ ಘೋಷಿಸಬೇಕು.
- ಜವಾಬ್ದಾರಿ ನಿಗದಿ: ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳನ್ನು ಸಂಕಷ್ಟಕ್ಕೆ ತಳ್ಳಬಾರದು.
- ವಯೋಮಿತಿ ಸಡಿಲಿಕೆ: ಈ ಪೇಪರ್ ಲೀಕ್‌ನಿಂದ ಒಂದು ವರ್ಷ ವ್ಯರ್ಥವಾದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿಶೇಷ ಸಡಿಲಿಕೆ ನೀಡಬೇಕು.
‘ಅಭ್ಯರ್ಥಿಗಳಿಗೆ ಶಿಕ್ಷೆ ನೀಡುವುದು ಅನ್ಯಾಯ’ : “ತಪ್ಪು ಸಂಸ್ಥೆಯದ್ದಾಗಿದ್ದರೆ ಶಿಕ್ಷೆ ಅಭ್ಯರ್ಥಿಗಳಿಗೆ ನೀಡುವುದು ನ್ಯಾಯವಲ್ಲ. ಯುವಕರು ತಮ್ಮ ಶ್ರಮದ ಫಲವನ್ನು ಪಡೆಯಬೇಕು. ವ್ಯವಸ್ಥೆಯ ವೈಫಲ್ಯಕ್ಕೆ ಅವರು ಬಲಿಯಾಗಬಾರದು,” ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ 10 ಸಾವಿರ ಯುವ ಸಂಘ ಸ್ಥಾಪನೆ: ಪ್ರತಿ ಸಂಘಕ್ಕೆ ₹10 ಲಕ್ಷ
ಪೇಪರ್ ಲೀಕ್ ವಿರುದ್ಧ ಶಿಕ್ಷಣ ಕ್ರಾಂತಿಯ ಅಗತ್ಯ : ಜುಲೈ 17ರಂದು ದೇಹರಾದೂನ್‌ನಲ್ಲಿ ಪೇಪರ್ ಲೀಕ್ ಸಮಸ್ಯೆಯ ಕುರಿತು ವಿವರವಾಗಿ ಮಾತನಾಡುವುದಾಗಿ ಹೇಳಿರುವ ರಾಹುಲ್ ಗಾಂಧಿ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ‘ಶಿಕ್ಷಣ ಕ್ರಾಂತಿ’ ಅಗತ್ಯವಿದೆ ಎಂದು ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚುತ್ತಿದ್ದು, ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯಕ್ಕೆ ಆತಂಕ ಎದುರಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರ TET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವೂ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.




















