SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಚಿಕ್ಕಮಗಳೂರಿನಲ್ಲಿ ಗಂಡು ಹುಲಿ ಮೃತದೇಹ ಪತ್ತೆ: ತನಿಖೆ ಆರಂಭ

ಚಿಕ್ಕಮಗಳೂರಿನಲ್ಲಿ ಗಂಡು ಹುಲಿ ಮೃತದೇಹ ಪತ್ತೆ: ತನಿಖೆ ಆರಂಭ

0
77

ಚಿಕ್ಕಮಗಳೂರು : ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೋಡಿ ಪ್ರಾದೇಶಿಕ ವಲಯದ ಹೊಸ ತೋಟ ಪ್ರದೇಶದಲ್ಲಿರುವ ಖಾಸಗಿ ಕಾಫಿ ತೋಟದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆಯಾಗಿರುವುದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸೋಮವಾರ ಸಂಜೆ ಸ್ಥಳೀಯರಿಗೆ ಕಾಫಿ ತೋಟದಲ್ಲಿ ಹುಲಿಯ ಮೃತದೇಹ ಕಾಣಿಸಿಕೊಂಡಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಅರಣ್ಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ CEO ನೇಮಕ: ಅರ್ಜಿ ಆಹ್ವಾನಿಸಿದ ಟ್ರಸ್ಟ್

ಒಂದು ದಿನದ ಹಿಂದೆಯೇ ಸಾವು? : ಪ್ರಾಥಮಿಕ ಮಾಹಿತಿಯ ಪ್ರಕಾರ, ಹುಲಿ ಸುಮಾರು ಒಂದು ದಿನದ ಹಿಂದೆಯೇ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಹುಲಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಷಪ್ರಯೋಗ, ವಿದ್ಯುತ್ ಸ್ಪರ್ಶ, ಇತರ ಪ್ರಾಣಿಗಳೊಂದಿಗೆ ಕಾದಾಟ ಅಥವಾ ಸಹಜ ಕಾರಣ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಮರಣೋತ್ತರ ಪರೀಕ್ಷೆ ಇಂದು : ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮಾರ್ಗಸೂಚಿಗಳ ಪ್ರಕಾರ ಮಂಗಳವಾರ ಹುಲಿಯ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ನಡೆಸಲಾಗುತ್ತದೆ. ಈ ಪರೀಕ್ಷೆಯ ವರದಿ ಬಂದ ಬಳಿಕವೇ ಹುಲಿಯ ಸಾವಿಗೆ ನಿಖರ ಕಾರಣ ಏನು ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

ಮರಣೋತ್ತರ ಪರೀಕ್ಷೆಯನ್ನು ವಿಡಿಯೋಗ್ರಫಿ ಮತ್ತು ಅಗತ್ಯ ವೈಜ್ಞಾನಿಕ ವಿಧಾನಗಳ ಮೂಲಕ ನಡೆಸಲಾಗಲಿದ್ದು, ಅದರ ವರದಿಯನ್ನು ಎನ್‌ಟಿಸಿಎಗೆ ಸಲ್ಲಿಸಲಾಗುತ್ತದೆ.

ವನ್ಯಜೀವಿ ಪ್ರೇಮಿಗಳ ಆತಂಕ : ಹುಲಿಯ ಸಾವಿನ ಘಟನೆಗೆ ವನ್ಯಜೀವಿ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದ ಪ್ರಮುಖ ಹುಲಿ ಆವಾಸ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿ ಹುಲಿಗಳ ಸಂರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹುಲಿ ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: H. D ರೇವಣ್ಣಗೆ ಮತ್ತೆ ಕಾನೂನು ಸಂಕಷ್ಟ: ಸುಪ್ರೀಂನಿಂದ ನೋಟಿಸ್

ಹುಲಿಯ ಸಾವು ಸಹಜ ಕಾರಣದಿಂದ ಸಂಭವಿಸಿದೆಯೇ ಅಥವಾ ಮಾನವ ಹಸ್ತಕ್ಷೇಪದಿಂದ ಆಗಿದೆಯೇ ಎಂಬುದನ್ನು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರುವಂತೆ ಅವರು ಒತ್ತಾಯಿಸಿದ್ದಾರೆ. ತಪ್ಪಿತಸ್ಥರು ಇದ್ದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲು : ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಹುಲಿಯ ಸಾವಿನ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಪ್ರಕರಣದ ನಿಜವಾದ ಕಾರಣ ಬಹಿರಂಗವಾಗುವ ನಿರೀಕ್ಷೆಯಿದೆ.