ವಿಜಯಪುರ: ಎಸ್‌ಐಆರ್ ಪ್ರಕ್ರಿಯೆಯನ್ನು ವಿಫಲಗೊಳಿಸಲು ಕೆಲವರು ಗೂಂಡಾಗಿರಿ ಮಾಡುತ್ತಿದ್ದಾರೆ, ಇದನ್ನು ಮಿನಿ ಪಾಕಿಸ್ತಾನ್ ಮಾಡಲು ಹೊರಟಿದ್ದಾರೆ, ಆದರೆ ನಾನು ಇದಕ್ಕೆ ಅವಕಾಶ ಕೊಡಲ್ಲ, ನಾಳೆಯಿಂದ ನಾನೇ ನಗರದಲ್ಲಿ ಸಂಚರಿಸುತ್ತೇನೆ, ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋಗಸ್ ಮತದಾನ ಮಾಡುವುದು, ವೋಟು ಹಾಕಿದ ತಕ್ಷಣವೇ ವಿಶೇಷ ಕೆಮಿಕಲ್ ಬಳಸಿ ಶಾಯಿ ಅಳಿಸಿ ಮತ್ತೊಂದು ವೋಟು ಹಾಕುವುದು, ಮಾರುವೇಷದಲ್ಲಿ ಬಂದು ವೋಟು ಹಾಕುವುದು ಹೀಗೆ ಎಲ್ಲ ಅಕ್ರಮಗಳನ್ನು ಮಾಡಿ ಮತ ಪಡೆಯುವವರಿಗೆ ಎಸ್‌ಐಆರ್ ಮುಳ್ಳಾಗಿದೆ. ನಗರದ ಕಾಂಗ್ರೆಸ್ ಅಭ್ಯರ್ಥಿಗೂ ಸಹ ಇದು ಮುಳುವಾಗಿರುವುದರಿಂದ ಆತ ಹತಾಶನಾಗಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳು ನಕಲಿ ಮತದಾನ ಮಾಡುವ ಸಂಸ್ಕೃತಿಯವರಲ್ಲ, ಬೋಗಸ್ ವೋಟಿಂಗ್ ಮಾಡುವವರು ಅವರೇ ನಾವಲ್ಲ, ಅವರು ಏನೇ ಲಗಾ ಹೊಡೆದರೂ ಮುಂದಿನ ಸಾರಿ ನಾನೇ ಆಯ್ಕೆಯಾಗುವುದು, ಹಿಂದೂಗಳ ಕೈಯಲ್ಲಿಯೇ ವಿಜಯಪುರ ಇರುತ್ತದೆ, ಹಿಂದೂಗಳ ಕೈಯಿಂದ ನಗರವನ್ನು ಕಸಿದುಕೊಳ್ಳಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ ನಾನು ಯಾರ ಆಟ ನಡೆಯಲು ಬಿಡುವುದಿಲ್ಲ ಎಂದು ಯತ್ನಾಳ ತಮ್ಮ ಸ್ಟೈಲ್‌ನಲ್ಲಿಯೇ ಗುಡುಗಿದರು.






















