ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಆಕ್ಸಿಜನ್ ಸ್ಫೋಟ ಪ್ರಕರಣದ ದುರ್ಘಟನೆಯಲ್ಲಿ ಯಾವುದೇ ವ್ಯಕ್ತಿಯ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪದಿಂದ ಸಂಭವಿಸಿದ್ದಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ಪಷ್ಟಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಶಸ್ತ್ರಚಿಕಿತ್ಸಕರು (ಡಿಸ್ಟ್ರಿಕ್ಟ್ ಸರ್ಜನ್) ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ, ಆಸ್ಪತ್ರೆಯಲ್ಲಿದ್ದ ಅರಿವಳಿಕೆ (ಅನೆಸ್ತೇಷಿಯಾ) ಯಂತ್ರವು ಹಳೆಯದಾಗಿದ್ದರಿಂದ ಈ ಸ್ಫೋಟ ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ಈ ಮೊದಲೇ ಹಳೆಯ ಯಂತ್ರವನ್ನು ಆದಷ್ಟು ಬೇಗ ಬದಲಾಯಿಸುವಂತೆ ಸೂಚಿಸಲಾಗಿತ್ತೇ ಹೊರತು, ಅದು ಅಪಾಯಕಾರಿ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ತಿಳಿಸಿದರು.
ವಿವಿಧ ಹಂತಗಳಲ್ಲಿ ತನಿಖೆ ಚುರುಕು: ಈ ಘಟನೆಯ ಕುರಿತು ಈಗಾಗಲೇ ರಾಜ್ಯ ಮಟ್ಟದಿಂದ ಒಂದು ವಿಶೇಷ ತಂಡ ತನಿಖೆ ನಡೆಸುತ್ತಿದೆ. ಇದರೊಂದಿಗೆ, ಸ್ಥಳೀಯವಾಗಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಮಟ್ಟದಲ್ಲೂ ಆಂತರಿಕ ತನಿಖಾ ತಂಡವನ್ನು ರಚಿಸಲಾಗಿದೆ. ಈ ತಂಡಕ್ಕೆ ವರದಿ ಸಲ್ಲಿಸಲು 3-4 ದಿನಗಳ ಕಾಲಾವಕಾಶ ನೀಡಲಾಗಿದ್ದು, ವರದಿ ಬಂದ ತಕ್ಷಣ ಎರಡೂ ವರದಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸುಮಾರು 50 ರಿಂದ 60 ಲಕ್ಷ ರೂ. ಆರ್ಥಿಕ ನಷ್ಟ: ಸ್ಫೋಟದಿಂದಾಗಿ ಆಸ್ಪತ್ರೆಯಲ್ಲಿದ್ದ ಪ್ರಮುಖ ಅನೆಸ್ತೇಷಿಯಾ ಟೇಬಲ್ ಸಂಪೂರ್ಣ ಹಾನಿಗೊಳಗಾಗಿದ್ದು, ಅದರ ಮೌಲ್ಯವೇ ಸುಮಾರು 35 ಲಕ್ಷ ರೂ. ಆಗಿದೆ. ಇದರೊಂದಿಗೆ ಒಟ್ಟಾರೆ ಎಲೆಕ್ಟ್ರಿಕಲ್ ವೈರಿಂಗ್ ಸೇರಿದಂತೆ ಇತರೆ ಹಾನಿಗಳನ್ನು ಒಳಗೊಂಡು ಅಂದಾಜು 50 ರಿಂದ 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿದ್ದು, ಇನ್ಶೂರೆನ್ಸ್ ಲಭ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಿಬ್ಬಂದಿಯ ಸಮಯಪ್ರಜ್ಞೆಗೆ ಶ್ಲಾಘನೆ: ಘಟನೆ ಸಂಭವಿಸಿ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಗ್ರೂಪ್-ಡಿ ಸಿಬ್ಬಂದಿ ಅತ್ಯಂತ ಜಾಗರೂಕತೆ ಮತ್ತು ಸಮಯಪ್ರಜ್ಞೆಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಿಬ್ಬಂದಿಯ ಈ ಶ್ಲಾಘನೀಯ ಕಾರ್ಯದಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಈ ನಿಟ್ಟಿನಲ್ಲಿ ಧೈರ್ಯ ತೋರಿದ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಶೀಘ್ರದಲ್ಲೇ ಅಭಿನಂದಿಸಿ, ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.




















