ಚಿಕ್ಕಮಗಳೂರು: ಕಾಫಿನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮೂಡಿಗೆರೆ ಪಟ್ಟಣ ಸೇರಿದಂತೆ ಕೊಟ್ಟಿಗೆಹಾರ, ಬಾಳೂರು, ಬಣಕಲ್ ಹಾಗೂ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಿಗ್ಗೆಯಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಯ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಮಳೆ ಹಾಗೂ ಗಾಳಿಯಿಂದ ವಾಹನ ಸಂಚಾರ ನಿಧಾನಗೊಂಡಿದ್ದು, ಮಲೆನಾಡಿನ ಕೆಲವೆಡೆ ಬಿಟ್ಟು ಬಿಟ್ಟು ಮಳೆ ಸುರಿಯಲಾರಂಭಿಸಿದೆ.
ಭಾನುವಾರ ಮಧ್ಯಾಹ್ನದಿಂದಲೇ ಮಲೆನಾಡು ಭಾಗದಲ್ಲಿ ಭೀಕರ ಗಾಳಿ ಹಾಗೂ ಭಾರಿ ಮಳೆ ಸುರಿಯುತ್ತಿದೆ. ಗಾಳಿಯ ತೀವ್ರತೆಗೆ ಬೃಹತ್ ಗಾತ್ರದ ಮರಗಳು ರಸ್ತೆಗಳಿಗೆ ಉರುಳಿಬಿದ್ದಿದ್ದು, ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮರಗಳನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಲು ಸ್ಥಳೀಯ ಆಡಳಿತ ಶ್ರಮಿಸುತ್ತಿದೆ.
ಸಿಡಿಲು ಮತ್ತು ಭಾರಿ ಗಾಳಿಗೆ ಮರಗಳು, ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಮಲೆನಾಡಿನ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದ್ದು, ಸಾರ್ವಜನಿಕರು ತೀವ್ರ ಕಂಗಾಲಾಗಿದ್ದಾರೆ.






















