SK Home Ad
Home ನಮ್ಮ ಜಿಲ್ಲೆ ಉಡುಪಿ ಕೊಲ್ಲೂರಿನಲ್ಲಿ ಭಕ್ತೆಯ ಹಣ ಎಗರಿಸಿದ ಮೂವರ ಬಂಧನ

ಕೊಲ್ಲೂರಿನಲ್ಲಿ ಭಕ್ತೆಯ ಹಣ ಎಗರಿಸಿದ ಮೂವರ ಬಂಧನ

0
316

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೋರ್ವರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂ. ನಗದು ಕಳವು ಮಾಡಿದ್ದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

ಜುಲೈ 5ರಂದು ನಿಮಿಷಾ ಹಾಗೂ ಅವರ ಪತಿ ಪ್ರಜೋಶ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ದೇವಸ್ಥಾನದ ಹೊರಾಂಗಣಕ್ಕೆ ಬಂದ ವೇಳೆ ಬೆಳಗ್ಗೆ 8.20ರ ಸುಮಾರಿಗೆ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂತು‌. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ 80 ಸಾವಿರ ರೂ. ನಗದು ಹೊಂದಿದ್ದ ಪರ್ಸ್ ನಾಪತ್ತೆಯಾಗಿರುವುದು ಗೊತ್ತಾಯಿತು‌.

ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಮಿಷಾ ಅವರು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸೆರೆಹಿಡಿದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿ ನೆರವಿನಿಂದ ಆರೋಪಿಗಳ ಪತ್ತೆ ಮಾಡಲಾಯಿತು.

ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮೂವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧಿತೆ ದುರ್ಗಮ್ಮ ವಿರುದ್ಧ ಈಗಾಗಲೇ ಎರಡು ಕಳ್ಳತನ ಪ್ರಕರಣ ದಾಖಲಾಗಿದ್ದು, ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಇನ್ನೋರ್ವ ಆರೋಪಿ ಶಾರದಾ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎರಡು ಹಾಗೂ ಮೈಸೂರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.