SK Home Ad
Home ನಮ್ಮ ಜಿಲ್ಲೆ ಬೆಂಗಳೂರು KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ

KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ

0
438

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಶನಿವಾರ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಸಿಗ್ನಲ್‌ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಸರಣಿ ಡಿಕ್ಕಿ ಉಂಟಾಗಿ, ಚಾಲಕ ಸೇರಿದಂತೆ 13 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಅಪಘಾತದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು.

ಇದನ್ನೂ ಓದಿ: ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಅಪಘಾತದ ವೇಳೆ ಹಿಂಬದಿಯ ಬಸ್‌ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಕಾಲು ಬಸ್‌ನ ಅವಶೇಷಗಳ ನಡುವೆ ಸಿಲುಕಿಕೊಂಡಿತ್ತು. ಮಹಿಳೆ ತೀವ್ರ ನೋವಿನಿಂದ ಕಿರುಚುತ್ತಾ ಸಹಾಯಕ್ಕಾಗಿ ಕಾಯುತ್ತಿದ್ದು, ಅವರ ಕಾಲಿಗೆ ಗಂಭೀರ ಗಾಯವಾಗಿ ಹೆಚ್ಚಿನ ರಕ್ತಸ್ರಾವವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಹಾರೆ, ಕಬ್ಬಿಣದ ರಾಡ್ ಹಾಗೂ ಇತರ ಉಪಕರಣಗಳ ನೆರವಿನಿಂದ ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದರು. ನಂತರ ಮಹಿಳೆಯ ಕಾಲನ್ನು ಸುರಕ್ಷಿತವಾಗಿ ಹೊರತೆಗೆದು ತಕ್ಷಣವೇ ಅಂಬುಲೆನ್ಸ್ ಮೂಲಕ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವು ವರದಿಗಳ ಪ್ರಕಾರ, ಮಹಿಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಸ್‌ನೊಳಗೆ ಸಿಲುಕಿಕೊಂಡಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!

ಅಪಘಾತದ ರಭಸಕ್ಕೆ ಎರಡೂ ಬಿಎಂಟಿಸಿ ಬಸ್‌ಗಳ ಮುಂಭಾಗ ಹಾಗೂ ಹಿಂಭಾಗದ ಭಾಗಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಗಳನ್ನು ತೆರವುಗೊಳಿಸಲು ಕ್ರೇನ್ ಬಳಸಲಾಗಿದೆ. ಈ ಕಾರ್ಯಾಚರಣೆಯಿಂದ ಕೆಆರ್ ಸರ್ಕಲ್‌ನಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.

ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಜೊತೆಗೆ ಅಪಘಾತದ ನಿಖರ ಕಾರಣವನ್ನು ಪರಿಶೀಲಿಸುತ್ತಿದ್ದಾರೆ. ಟೆಂಪೋ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆಯಿಂದ ಈ ಅಪಘಾತ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.