SK Home Ad
Home ಸುದ್ದಿ ದೇಶ ‘ಬರ್ತ್‌ಡೇ ಗಿಫ್ಟ್‌’ ಎಂದೇ ವಿಡಿಯೊ ಕಾಲ್‌ನಲ್ಲೇ ನೇಣಿಗೆ ಶರಣಾದ ಮಹಿಳೆ

‘ಬರ್ತ್‌ಡೇ ಗಿಫ್ಟ್‌’ ಎಂದೇ ವಿಡಿಯೊ ಕಾಲ್‌ನಲ್ಲೇ ನೇಣಿಗೆ ಶರಣಾದ ಮಹಿಳೆ

0
133

ಹೈದರಾಬಾದ್: ಹೋಟೆಲ್‌ ಕೊಠಡಿಯಲ್ಲಿ ಸ್ನೇಹಿತನೊಂದಿಗೆ ವಿಡಿಯೊ ಕರೆ ಮಾತನಾಡುತ್ತಿದ್ದಾಗಲೇ 26 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಲಂಗರ್‌ ಹೌಜ್‌ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತರನ್ನು ಅಲ್ವಾಲ್‌ ನಿವಾಸಿ ರೇಣುಕಾ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ 3 ಗಂಟೆಯ ಸುಮಾರಿಗೆ ಶೇಖ್‌ ಎಂಬ ವ್ಯಕ್ತಿಯೊಂದಿಗೆ ಲಂಗರ್‌ ಹೌಜ್‌ನ ಹೋಟೆಲ್‌ಗೆ ರೇಣುಕಾ ಬಂದಿದ್ದಾಳೆ. ಇಬ್ಬರೂ ಹೋಟೆಲ್‌ನಲ್ಲಿ ಊಟ ಮಾಡಿದ್ದು, ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಶೇಖ್‌ ಹೋಟೆಲ್‌ನಿಂದ ಹೊರಟಿದ್ದಾನೆ. ಆದರೆ ರೇಣುಕಾ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾಳೆ.

ಹೋಟೆಲ್‌ನ ದಾಖಲೆ ಪ್ರಕಾರ, ರಾತ್ರಿ 11.56ಕ್ಕೆ ರೇಣುಕಾ ಊಟವನ್ನು ಆರ್ಡರ್‌ ಮಾಡಿದ್ದು, ಬಳಿಕ ರಾತ್ರಿ 12.18ರ ಸುಮಾರಿಗೆ ತಮ್ಮ ಸ್ನೇಹಿತ ಸತ್ಯಾಗೆ ವಿಡಿಯೊ ಕರೆ ಮಾಡಿದ್ದಾಳೆ. ಈ ವೇಳೆ ಸತ್ಯಾ ಮದ್ಯಪಾನ ಮಾಡಬೇಡಿ, ಆರೋಗ್ಯದ ಬಗ್ಗೆ ಕಾಳಜಿವಹಿಸು ಎಂದು ಸಲಹೆ ನೀಡಿದ್ದಾನೆ ಎನ್ನಲಾಗಿದೆ.

ಆದರೆ, ಇದೇ ವೇಳೆ ರೇಣುಕಾ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ಜುಲೈ 4ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಸತ್ಯಾಗೆ ಇದನ್ನೇ “ಬರ್ತ್‌ಡೇ ಗಿಫ್ಟ್‌” ಎಂದು ಹೇಳಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ಇದಾದ ಕೆಲವೇ ಕ್ಷಣಗಳಲ್ಲಿ ವಿಡಿಯೊ ಕರೆ ನಡೆಯುತ್ತಿದ್ದಾಗಲೇ ರೇಣುಕಾ ಹೋಟೆಲ್‌ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಬರಿಗೊಂಡ ಸತ್ಯಾ ತಕ್ಷಣ ಇತರರಿಗೆ ಮಾಹಿತಿ ನೀಡಿ ಹೋಟೆಲ್‌ಗೆ ಧಾವಿಸಿದರೂ, ಅಷ್ಟರಲ್ಲೇ ರೇಣುಕಾ ಮೃತಪಟ್ಟಿದ್ದರು.

ಲಂಗರ್‌ ಹೌಜ್‌ ಸಬ್-ಇನ್ಸ್‌ಪೆಕ್ಟರ್ ಸಯ್ಯದ್‌ ಮುನ್ವರ್‌ ಅಲಿ ಮಾತನಾಡಿ, “ರಾತ್ರಿ ಸುಮಾರು 12.24ರ ವೇಳೆಗೆ ವಿಡಿಯೊ ಕರೆ ವೇಳೆ ರೇಣುಕಾ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಅವರು ಬುಧವಾರ ಶೇಖ್‌ ಎಂಬ ವ್ಯಕ್ತಿಯೊಂದಿಗೆ ಹೋಟೆಲ್‌ಗೆ ಬಂದಿದ್ದರು. ಗುರುವಾರ ರಾತ್ರಿ ಆತ ಹೋಟೆಲ್‌ನಿಂದ ತೆರಳಿದ್ದ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ರೇಣುಕಾ ವಿವಾಹಿತರಾಗಿದ್ದು, ಏಳು ವರ್ಷದ ಮಗನಿದ್ದಾನೆ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ರೇಣುಕಾ ನಗರದ ರೆಸ್ಟೋರೆಂಟ್‌ ಹಾಗೂ ಪಬ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಶೇಖ್‌ ಕೂಡ ವಿವಾಹಿತನಾಗಿದ್ದು, ಮೂವರು ಮಕ್ಕಳಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಶೇಖ್ ಡೈರಿ ಉದ್ಯಮ ನಡೆಸುತ್ತಿದ್ದು, ರೇಣುಕಾಗೆ ಆರ್ಥಿಕ ನೆರವು ನೀಡುತ್ತಿದ್ದ‌ ಎನ್ನಲಾಗಿದೆ. ಅಲ್ಲದೆ, ರೇಣುಕಾ ಈ ಹಿಂದೆಯೂ ಇದೇ ಹೋಟೆಲ್‌ಗೆ ಶೇಖ್‌ ಸೇರಿದಂತೆ ಇತರ ಇಬ್ಬರು ಪುರುಷ ಸ್ನೇಹಿತರೊಂದಿಗೆ ಭೇಟಿ ನೀಡಿದ್ದಾರೆಯೇ ಎಂಬ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.