SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಅಗ್ನಿ ಅವಘಡ: ತನಿಖೆಗೆ 8 ಸದಸ್ಯರ ಸಮಿತಿ ರಚನೆ

ಚಿಗಟೇರಿ ಜಿಲ್ಲಾಸ್ಪತ್ರೆ ಅಗ್ನಿ ಅವಘಡ: ತನಿಖೆಗೆ 8 ಸದಸ್ಯರ ಸಮಿತಿ ರಚನೆ

0
86

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ (ಜೂ. 30) ಸಂಭವಿಸಿದ ಅಗ್ನಿ ಅವಘಡದ ಕುರಿತು ಸಮಗ್ರ ತನಿಖೆ ನಡೆಸಲು ಜಿಲ್ಲಾಡಳಿತ 8 ಸದಸ್ಯರ ತನಿಖಾ ಸಮಿತಿ ರಚಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಈ ಕುರಿತು ಅಧಿಕೃತ ಜ್ಞಾಪನಾ ಹೊರಡಿಸಿದ್ದು, ಅಗ್ನಿ ಅವಘಡದ ಕಾರಣ, ಸಂಭವಿಸಿದ ಪರಿಸ್ಥಿತಿಗಳು ಹಾಗೂ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸಿ ಮೂರು ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದ್ದಾರೆ.

ತನಿಖಾ ಸಮಿತಿಯ ಸದಸ್ಯರು: ತನಿಖಾ ತಂಡದ ಸಮಿತಿ ಮುಖ್ಯಸ್ಥರಾಗಿ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್, ಸದಸದ್ಯರಾಗಿ ನಗರ ಉಪವಿಭಾಗದ ಡಿಎಸ್ಪಿ ಶರಣ ಬಸವೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ಸುಹೇಲ್, ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸ್.ಕೆ. ಪಾಟೀಲ್, ಜೆಜೆಎಂ ವೈದ್ಯಕೀಯ ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥರು, ಸಿ.ಜಿ. ಆಸ್ಪತ್ರೆಯ ಅರವಳಿಕೆ ವಿಭಾಗದ ಮುಖ್ಯಸ್ಥರು ಹಾಗೂ ಬಳ್ಳಾರಿ ವಿಮ್ಸ್ ಬಯೋಮೆಡಿಕಲ್ ಇಂಜಿನಿಯರ್ ಎನ್. ಶಾಂತಮೂರ್ತಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಈ ಸಮಿತಿಯು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳ ಪರಿಶೀಲನೆ, ಉಪಕರಣಗಳ ತಪಾಸಣೆ, ಅಗ್ನಿ ಅವಘಡಕ್ಕೆ ಕಾರಣವಾದ ಅಂಶಗಳು ಹಾಗೂ ಭದ್ರತಾ ಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ಪೂರಕ ದಾಖಲೆಗಳು ಮತ್ತು ಸ್ಪಷ್ಟ ಅಭಿಪ್ರಾಯದೊಂದಿಗೆ ವಿವರವಾದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ.

ಇದೇ ವೇಳೆ, ವಿಮ್ಸ್ ಬಳ್ಳಾರಿ ನಿರ್ದೇಶಕರಿಗೆ ಪತ್ರ ಬರೆದು ಬಯೋಮೆಡಿಕಲ್ ಇಂಜಿನಿಯರ್ ಶ್ರೀ ಶಾಂತಮೂರ್ತಿ ಎನ್. ಅವರನ್ನು ಸ್ಥಳ ಹಾಗೂ ಉಪಕರಣಗಳ ತಾಂತ್ರಿಕ ಪರಿಶೀಲನೆಗಾಗಿ ನಿಯೋಜಿಸುವಂತೆ ಜಿಲ್ಲಾಡಳಿತ ಕೋರಿದೆ.