ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದು, ಒಟ್ಟು ₹10.63 ಲಕ್ಷಕ್ಕೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಸಮೀಪದ ಲಾಡ್ಜ್‌ನ ಕೊಠಡಿಯೊಂದರಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಸ್ಪಿ ಶೇಖರ್ ಹೆಚ್.ಟಿ. ಅವರ ನಿರ್ದೇಶನ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ಎ.ಎನ್.ಟಿ.ಎಫ್ ತಂಡ ದಾಳಿ ನಡೆಸಿತು.
ಪೊಲೀಸ್ ನಿರೀಕ್ಷಕ ಕೆ.ಟಿ. ಅಣ್ಣಯ್ಯ ಅವರ ನೇತೃತ್ವದಲ್ಲಿ ಪಿಎಸ್‌ಐ ಸಾಗರ್ ಅತ್ತಾರ್ ವಾಲಾ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ವಶಕ್ಕೆ ಪಡೆದರು. ಆರೋಪಿಗಳಿಂದ ₹10.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗುತ್ತಿದುರ್ಗ ಗ್ರಾಮದಿಂದ ಚಿಕ್ಕಅರಕೆರೆ ಹೊಸೂರು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ನೂರ್ ಅಹಮದ್ ಅವರ ನೇತೃತ್ವದಲ್ಲಿ ಎಎಸ್‌ಐ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ 8 ಮಂದಿಯನ್ನು ವಶಕ್ಕೆ ಪಡೆದು, ₹9,150 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಕುಂದ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ಪೊಲೀಸ್ ಉಪನಿರೀಕ್ಷಕ ಅಜ್ಜಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಿ, 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ₹4,600 ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಎ.ಎನ್.ಟಿ.ಎಫ್ ತಂಡದ ಪೊಲೀಸ್ ನಿರೀಕ್ಷಕ ಕೆ.ಟಿ. ಅಣ್ಣಯ್ಯ, ಪಿಎಸ್‌ಐ ಸಾಗರ್ ಅತ್ತಾರ್ ವಾಲಾ ಹಾಗೂ ಸಿಬ್ಬಂದಿ ಪ್ರಕಾಶ್, ಮಂಜಪ್ಪ ಮತ್ತು ಗೋವಿಂದರಾಜ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಪ್ರಶಂಸಿಸಿದ್ದಾರೆ.





















