ಕಡೂರು: ಕಳೆದ ಐದು ದಶಕಗಳಿಂದ ದೇವಸ್ಥಾನಕ್ಕೆ ಪ್ರವೇಶ ಇಲ್ಲದೆ ಇದ್ದ ನಿಡಘಟ್ಟ ಗ್ರಾಮದ ದಲಿತರು ಮಂಗಳವಾರ ತಹಸೀಲ್ದಾರ್ ನೇತೃತ್ವದಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಪ್ರವೇಶ ಪಡೆದರು.
ತಾಲೂಕಿನ ಇತಿಹಾಸ ಪ್ರಸಿದ್ಧ ನಿಡಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ದಲಿತರು ಪ್ರವೇಶಿಸಿ ದೇವರ ದರ್ಶನ ಪಡೆದರು. ಇಲ್ಲಿಯವರೆಗೂ ಈ ದೇವಸ್ಥಾನಕ್ಕೆ ದಲಿತರ ಪ್ರವೇಶವಿರಲಿಲ್ಲ. ಯಾವುದೋ ಮೂಢನಂಬಿಕೆ ಹಾಗೂ ಹಿಂದಿನಿಂದಲೂ ನಡೆದುಬಂದ ಪದ್ಧತಿಯಂತೆ ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡುತ್ತಿರಲಿಲ್ಲ. ಬದಲಾದ ಕಾಲಮಾನದಲ್ಲಿ ದಲಿತರಿಗೂ ಪ್ರವೇಶಾವಕಾಶ ನೀಡಬೇಕೆಂಬ ಮನವಿಯನ್ನು ಗ್ರಾಮದ ದಲಿತ ಮುಖಂಡರು ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಸಲ್ಲಿಸಿದ್ದರು.
ತಹಶೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಒಳಗೊಂಡಂತೆ ದಲಿತ ಮುಖಂಡರ ಸಮ್ಮುಖದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಶಾಂತಿ ಸೌರ್ಹಾದತೆಯ ಸಭೆಯಲ್ಲಿ ಎಲ್ಲರ ಸ್ಪಂದನೆಯೊದಿಗೆ ದೇವಾಲಯ ಪ್ರವೇಶಕ್ಕೆ ಒಮ್ಮತ ಮೂಡಿ, ಪ್ರಕರಣ ಸುಖಾಂತ್ಯ ಕಂಡಿತು.
ತಹಶೀಲ್ದಾರ್ ನೇತೃತ್ವದಲ್ಲಿ ಪ್ರವೇಶ: ಮಂಗಳವಾರ ದೇವಸ್ಥಾನಕ್ಕೆ ಆಗಮಿಸಿದ ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಸಿ.ಆರ್. ಪ್ರವೀಣ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಡಿವೈಎಸ್ಪಿ ಪರಶುರಾಮಪ್ಪ, ಸಿಪಿಐ ರಫೀಕ್ ನೇತೃತ್ವದ ಪೊಲೀಸ್ ಸಿಬ್ಬಂದಿಯೊಂದಿಗೆ ದೇವಾಲಯ ಪ್ರಾಂಗಣದ ಬಳಿ ನೆರೆದಿದ್ದ ಗ್ರಾಮದ ದಲಿತರು, ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯವನ್ನು ಪ್ರವೇಶಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ನಂತರ ತಹಶೀಲ್ದಾರ್ ಸಮ್ಮುಖದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿ ದಶಕಗಳ ಕಾಲ ನಡೆದುಬಂದಿದ್ದ ಪದ್ಧತಿಗೆ ಕೊನೆ ಹಾಡಿದರು.





















