SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮುನಿರಾಬಾದ್‌: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು

ಮುನಿರಾಬಾದ್‌: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು

0
159

ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಸೇರುವುದು ಐತಿಹಾಸಿಕ ಕ್ಷಣ ಎಂದು ಹೇಳಿದರು.

ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ನೆರೆದಿದ್ದ ರೈತರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

“ಎಲ್ಲಾ ರೈತ ಬಾಂಧವರಿಗೆ ನನ್ನ ನಮಸ್ಕಾರ” ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ನಾಯ್ಡು, “ನನಗೆ ಕನ್ನಡ ಇನ್ನಷ್ಟು ಚೆನ್ನಾಗಿ ಬಂದಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಮಾತನಾಡಬಹುದಿತ್ತು” ಎಂದು ಹೇಳಿದರು. ಇದೇ ವೇಳೆ, “ತುಂಗಭದ್ರಾ ತಾಯಿಗೆ ಶಿರಬಾಗಿ ನಮಸ್ಕಾರ ಸಲ್ಲಿಸುತ್ತೇನೆ. ತುಂಗಭದ್ರಾ ಆಡಳಿತ ಮಂಡಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ

ತುಂಗಾ ಪಾನಃ, ಗಂಗಾ ಸ್ನಾನಃ: ತುಂಗಭದ್ರಾ ನದಿಯ ಮಹತ್ವವನ್ನು ಉಲ್ಲೇಖಿಸಿದ ಅವರು, “ತುಂಗಾ ಪಾನಃ, ಗಂಗಾ ಸ್ನಾನಃ” ಎಂಬ ಪ್ರಸಿದ್ಧ ನುಡಿಗಟ್ಟನ್ನು ಪ್ರಸ್ತಾಪಿಸಿ, ತುಂಗಾ ನದಿಯ ನೀರು ಶುದ್ಧತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ನಾಯ್ಡು, “ಕೊಚ್ಚಿಹೋಗಿದ್ದು ಕೇವಲ ಒಂದು ಗೇಟ್ ಮಾತ್ರವಲ್ಲ, ಜಲಾಶಯದ ಸುರಕ್ಷತೆಗೂ ಅದು ದೊಡ್ಡ ಸವಾಲಾಗಿತ್ತು. ಆದರೆ ಇಂದು ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಹೊಸದಾಗಿ ಅಳವಡಿಸಿ ಲೋಕಾರ್ಪಣೆ ಮಾಡಲಾಗಿದೆ. ಕೇವಲ ಆರು ತಿಂಗಳ ಅವಧಿಯಲ್ಲಿ ಈ ಮಹತ್ವದ ಕಾಮಗಾರಿ ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ” ಎಂದರು.

ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ

ಐತಿಹಾಸಿಕ ಕ್ಷಣ: ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವುದನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ ಅವರು, “ಈ ಕಾರ್ಯಕ್ರಮ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ತುಂಗಭದ್ರಾ ಜಲಾಶಯವು ಮೂರು ರಾಜ್ಯಗಳ ರೈತರ ಜೀವನಾಡಿಯಾಗಿದ್ದು, ಅದರ ರಕ್ಷಣೆಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.

“ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಇನ್ನಷ್ಟು ವಿಳಂಬವಾಗಿದ್ದರೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಆದರೆ ಈಗ ಆ ಅಪಾಯ ದೂರವಾಗಿದೆ” ಎಂದು ತಿಳಿಸಿದ ನಾಯ್ಡು, ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲು ಕೇಂದ್ರ ಸರ್ಕಾರದ ಸಹಕಾರವೂ ಕಾರಣವಾಗಿದೆ ಎಂದರು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಅಧ್ಯಾಯ: ನಕಲಿ ಪ್ರತಿಗಳ ಬಗ್ಗೆ NCERT ಎಚ್ಚರಿಕೆ!

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳನ್ನು ಶ್ಲಾಘಿಸಿದ ನಾಯ್ಡು, “ರೈಟ್ ಟೈಮ್, ರೈಟ್ ಡಿಸಿಷನ್ – ಅದು ನರೇಂದ್ರ ಮೋದಿ” ಎಂದು ಹೇಳಿ ಪ್ರಧಾನಿ ಅವರ ನಾಯಕತ್ವವನ್ನು ಪ್ರಶಂಸಿಸಿದರು.