SK Home Ad
Home ಸುದ್ದಿ ದೇಶ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಆಹ್ವಾನ

ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಆಹ್ವಾನ

0
76

ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಆಹ್ವಾನ ನೀಡಿದ್ದಾರೆ ಎಂದು ಇರಾನ್ ರಾಜತಾಂತ್ರಿಕ ಮೂಲಗಳು ಬುಧವಾರ ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿ ನಡೆದ ಸಂಘರ್ಷ ಮತ್ತು ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಖಮೇನಿ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಇದೀಗ ಜುಲೈ 5ರಿಂದ ಜುಲೈ 9ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸರ್ಕಾರಿ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಕಾರ್ಯಕ್ರಮಗಳನ್ನು ನಡೆಸಲು ಇರಾನ್ ಸರ್ಕಾರ ಸಿದ್ಧತೆ ನಡೆಸಿದೆ.

ಅಂತ್ಯಕ್ರಿಯೆ ಕಾರ್ಯಕ್ರಮಗಳು ದೇಶದ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ಕೇಂದ್ರಗಳಾದ ಟೆಹ್ರಾನ್, ಕೋಮ್ ಹಾಗೂ ಮಶಾದ್ ನಗರಗಳಲ್ಲಿ ನಡೆಯಲಿವೆ. ಜುಲೈ 5, 6 ಮತ್ತು 7ರಂದು ಟೆಹ್ರಾನ್ ಹಾಗೂ ಕೋಮ್‌ನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಗಳು, ಧಾರ್ಮಿಕ ಪ್ರಾರ್ಥನೆಗಳು ಮತ್ತು ಬೃಹತ್ ಮೆರವಣಿಗೆಗಳು ಆಯೋಜನೆಯಾಗಲಿದ್ದು, ಅಂತಿಮ ವಿಧಿವಿಧಾನಗಳು ಜುಲೈ 9ರಂದು ಮಶಾದ್ ನಗರದಲ್ಲಿ ನೆರವೇರಲಿವೆ.

ಕೋಟ್ಯಂತರ ಜನ ಭಾಗವಹಿಸುವ ನಿರೀಕ್ಷೆ: ಖಮೇನಿ ಅವರ ಅಂತಿಮ ಯಾತ್ರೆಯಲ್ಲಿ ಇರಾನ್‌ನ ವಿವಿಧ ಪ್ರಾಂತ್ಯಗಳಿಂದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ದೇಶಾದ್ಯಂತ ನಡೆಯಲಿರುವ ಶ್ರದ್ಧಾಂಜಲಿ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳಲ್ಲಿ ಒಟ್ಟು 1 ಕೋಟಿಗೂ ಅಧಿಕ ಜನರು ಪಾಲ್ಗೊಳ್ಳಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಮುಖ ನಗರಗಳಲ್ಲಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಮೋದಿ ಪಾಲ್ಗೊಳ್ಳುವರೇ?: ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದರೂ, ಈ ಕುರಿತು ಭಾರತ ಸರ್ಕಾರ ಅಥವಾ ವಿದೇಶಾಂಗ ಸಚಿವಾಲಯದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಪ್ರಧಾನಿ ಸ್ವತಃ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೋ ಅಥವಾ ಭಾರತದ ಪರವಾಗಿ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿಯನ್ನು ಕಳುಹಿಸಲಾಗುವುದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಖಮೇನಿ ನಿಧನದ ಬಳಿಕ ನಾಯಕತ್ವ ಬದಲಾವಣೆ: ಸುಮಾರು ಮೂರು ದಶಕಗಳ ಕಾಲ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯ ಕೇಂದ್ರಬಿಂದುವಾಗಿದ್ದ ಖಮೇನಿ, ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನವೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಅವರ ನಿಧನದ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವೇಗವಾಗಿ ನಡೆದಿದ್ದು, ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ಮುಂದಿನ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಜಾಗತಿಕ ಗಮನ ಸೆಳೆದ ಅಂತ್ಯಕ್ರಿಯೆ: ಖಮೇನಿ ಅವರ ಅಂತ್ಯಕ್ರಿಯೆ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿಯೇ ಅಲ್ಲದೆ, ಜಾಗತಿಕ ರಾಜತಾಂತ್ರಿಕ ಮಹತ್ವದ ಘಟನೆಯಾಗಿಯೂ ಪರಿಗಣಿಸಲಾಗಿದೆ. ವಿವಿಧ ರಾಷ್ಟ್ರಗಳ ನಾಯಕರು, ಉನ್ನತ ಮಟ್ಟದ ಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಮಧ್ಯಪ್ರಾಚ್ಯದ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಮೇಲೂ ಈ ಕಾರ್ಯಕ್ರಮದ ಪರಿಣಾಮ ಬೀರುವ ಸಾಧ್ಯತೆ ಇದೆ.