SK Home Ad
Home ಸುದ್ದಿ ರಾಜ್ಯ ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

0
97

ಕನಕಪುರ: ಕನಕಪುರದ ಐತಿಹಾಸಿಕ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳು, ಮಾತೃವಾತ್ಸಲ್ಯದ ಕರುಣಾಮಯಿಗಳು, ಸಹಸ್ರಾರು ವಿದ್ಯಾರ್ಥಿಗಳ ದಿವ್ಯ ಜ್ಯೋತಿಯಾಗಿದ್ದ ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ಸೋಮವಾರ ಸಂಜೆ ಲಿಂಗೈಕ್ಯರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಭಕ್ತ ಸಮುದಾಯ, ಶಿಷ್ಯವೃಂದ ಹಾಗೂ ಧಾರ್ಮಿಕ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.

ಸರಳತೆ, ಸಾತ್ವಿಕತೆ ಹಾಗೂ ಸೇವಾಭಾವದ ಪ್ರತೀಕವಾಗಿದ್ದ ಶ್ರೀಗಳು ಐದು ದಶಕಗಳಿಗೂ ಹೆಚ್ಚು ಕಾಲ ಕನಕಪುರ ಶ್ರೀ ದೇಗುಲ ಮಠದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿ, ಮಠವನ್ನು ಶಿಕ್ಷಣ, ದಾಸೋಹ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವನ್ನಾಗಿ ರೂಪಿಸಿದ್ದರು.

ಶ್ರೀಗಳ ಅಂತ್ಯಕ್ರಿಯೆ ಹಾಗೂ ಅಂತಿಮ ವಿಧಿವಿಧಾನಗಳು ಜೂನ್ 23, 2026ರ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಕನಕಪುರದ ಶ್ರೀ ದೇಗುಲ ಮಠದಲ್ಲಿ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೆರವೇರಲಿವೆ ಎಂದು ಮಠದ ಮೂಲಗಳು ತಿಳಿಸಿವೆ.

ಸಿದ್ದಗಂಗಾ ಪರಂಪರೆಯೊಂದಿಗೆ ಆತ್ಮೀಯ ನಂಟು : ತುಮಕೂರಿನ ಸಿದ್ದಗಂಗಾ ಮಠ ಹಾಗೂ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳು, ಸಿದ್ದಗಂಗಾ ಮಠದ ತ್ರಿವಿಧ ದಾಸೋಹ ಪದ್ಧತಿಯನ್ನು ಕನಕಪುರ ಶ್ರೀ ದೇಗುಲ ಮಠದಲ್ಲಿಯೂ ಯಶಸ್ವಿಯಾಗಿ ಅಳವಡಿಸಿಕೊಂಡಿದ್ದರು. ಇದರ ಫಲವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಮತ್ತು ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿ, ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದರು.

ಗಣ್ಯರಿಂದ ಸಂತಾಪ : ಶ್ರೀಗಳ ನಿಧನಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಶ್ರೀಗಳ ಜೀವನ ಪಯಣ : 1943ರ ಮೇ 20ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಶಿವರುದ್ರಪ್ಪ. ಕುರುಬೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಚಾಮರಾಜನಗರದಲ್ಲಿ ಪ್ರೌಢಶಿಕ್ಷಣ ಹಾಗೂ ಮೈಸೂರಿನ ಶಾರದಾ ವಿಲಾಸ ಮತ್ತು ಯುವರಾಜ ಕಾಲೇಜುಗಳಲ್ಲಿ ಬಿಎಸ್ಸಿ ಪದವಿ ಪಡೆದಿದ್ದರು.

1968ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಅವರು, 1970ರಲ್ಲಿ ಮರಿಯಾಲ ಶ್ರೀಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರಿಂದ ಸೇವೆಗೆ ರಾಜೀನಾಮೆ ನೀಡಿ ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶಿಸಿದರು. ನಂತರ ಕೆಲಕಾಲ ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಮಠದ ಜವಾಬ್ದಾರಿಯನ್ನು ನಿರ್ವಹಿಸಿ, ಬಳಿಕ ಕನಕಪುರ ಶ್ರೀ ದೇಗುಲ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡರು.

ಶಿಕ್ಷಣ, ದಾಸೋಹ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ : ಕನಕಪುರ ಶ್ರೀ ದೇಗುಲ ಮಠದ 13ನೇ ಪೀಠಾಧಿಪತಿಗಳಾಗಿದ್ದ ಶ್ರೀಗಳು, ಮಠವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದರು. ತ್ರಿವಿಧ ದಾಸೋಹ, ಶಿಕ್ಷಣ ಸಂಸ್ಥೆಗಳು, ಪ್ರಸಾದ ನಿಲಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು, ಅನಾಥಾಲಯಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು.

ಮಠದ ಕೃಷಿ ಭೂಮಿಯನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸಿ, ಮಠದ ಸಮುಚ್ಚಯವನ್ನು ವಿಸ್ತರಿಸುವಲ್ಲಿಯೂ ಮಹತ್ತರ ಪಾತ್ರವಹಿಸಿದ್ದರು. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ, ಮಠವನ್ನು ಜನಪರ ಸಂಸ್ಥೆಯಾಗಿ ರೂಪಿಸಿದ್ದರು.

ಎಲ್ಲರಿಗೂ ಸಮಾನ ಪ್ರೀತಿ : ಯಾವುದೇ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಶ್ರೀಗಳು, “ಮಠ ಎಲ್ಲರಿಗೂ” ಎಂಬ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿದ್ದರು. ಸಜ್ಜನಿಕೆ, ಮೃದು ಸ್ವಭಾವ ಹಾಗೂ ಕರುಣಾಮಯ ವ್ಯಕ್ತಿತ್ವದಿಂದ ಭಕ್ತರ ಆರಾಧ್ಯ ಗುರುಗಳಾಗಿದ್ದರು. ಮಠದ ಮುಂದಿನ ಬೆಳವಣಿಗೆಗಾಗಿ ಡಾ. ಶ್ರೀ ಚನ್ನಬಸವ ಸ್ವಾಮೀಜಿಗಳನ್ನು ಕಿರಿಯ ಶ್ರೀಗಳಾಗಿ ಆಯ್ಕೆ ಮಾಡಿ, ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಮಠದ ಸೇವಾ ಪರಂಪರೆಯನ್ನು ನಿರಂತರವಾಗಿ ಮುಂದುವರಿಯುವಂತೆ ಮಾಡಿದ್ದರು.

ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳ ಲಿಂಗೈಕ್ಯದಿಂದ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದ್ದು, ಭಕ್ತ ಸಮುದಾಯದ ಹೃದಯದಲ್ಲಿ ಅವರು ಸದಾ ಅಮರರಾಗಿರಲಿದ್ದಾರೆ.