SK Home Ad
Home ಸುದ್ದಿ ದೇಶ ಕರ್ನಾಟಕ-ತಮಿಳುನಾಡು ಜಲ ವಿವಾದ ಮತ್ತೆ ಚರ್ಚೆಗೆ: ಮೇಕೆದಾಟು ಕುರಿತ ನಿರ್ಣಯ ಅಂಗೀಕಾರ

ಕರ್ನಾಟಕ-ತಮಿಳುನಾಡು ಜಲ ವಿವಾದ ಮತ್ತೆ ಚರ್ಚೆಗೆ: ಮೇಕೆದಾಟು ಕುರಿತ ನಿರ್ಣಯ ಅಂಗೀಕಾರ

0
105

ಮೇಕೆದಾಟು ಯೋಜನೆಗೆ ವಿರೋಧ: ಕೇಂದ್ರಕ್ಕೆ ಅನುಮತಿ ನೀಡದಂತೆ ತಮಿಳುನಾಡು ವಿಧಾನಸಭೆ ಸರ್ವಾನುಮತ ನಿರ್ಣಯ

ಚೆನ್ನೈ: ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ, ಪರಿಸರ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಸದನದಲ್ಲಿ ಮಂಡಿಸಿದ ನಿರ್ಣಯಕ್ಕೆ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಬೆಂಬಲ ಸೂಚಿಸಿದ್ದು, ಯಾವುದೇ ವಿರೋಧವಿಲ್ಲದೆ ಅದು ಅಂಗೀಕೃತಗೊಂಡಿದೆ.

ಇದನ್ನೂ ಓದಿ: CID ಬಲೆಗೆ ಬಿದ್ದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್

ನಿರ್ಣಯದಲ್ಲಿ ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆಯನ್ನು “ಏಕಪಕ್ಷೀಯ ಕ್ರಮ” ಎಂದು ಉಲ್ಲೇಖಿಸಲಾಗಿದ್ದು, ಈ ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿಯ 2007 ರ ಅಂತಿಮ ತೀರ್ಪು ಹಾಗೂ ಸುರ್ಪಿಂ ಕೋರ್ಟ್‌ ನೀಡಿದ 2018ರ ಆದೇಶದ ಮೂಲಭೂತ ಅಂಶಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಮುಖ್ಯಮಂತ್ರಿ ವಿಜಯ್ ಮಂಡಿಸಿದ ನಿರ್ಣಯದಲ್ಲಿ, ಕಾವೇರಿ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದ್ದು, ಲಭ್ಯವಿರುವ ನೀರಿನ ಹಂಚಿಕೆಯನ್ನು ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರ್ಧರಿಸಿವೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ, ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಜಲಾಶಯ ಅಥವಾ ನೀರು ಸಂಗ್ರಹಣಾ ಯೋಜನೆ ಕೈಗೊಳ್ಳಬಾರದು ಹಾಗೂ ಹೆಚ್ಚುವರಿ ಪ್ರಮಾಣದ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಿಹೇಳಲಾಗಿದೆ.

ಇದನ್ನೂ ಓದಿ: ಹೋಂ ಸ್ಟೇ ಮೇಲೆ ದಾಳಿ: MDMA ಸಹಿತ 7 ಮಂದಿ ಪೊಲೀಸ್ ವಶಕ್ಕೆ

ಕಾವೇರಿ ನೀರಿನ ಹಂಚಿಕೆ ವಿಚಾರವು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅತ್ಯಂತ ಸೂಕ್ಷ್ಮ ಹಾಗೂ ದೀರ್ಘಕಾಲದ ವಿವಾದವಾಗಿದ್ದು, ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಿ ಇತರ ರಾಜ್ಯಗಳ ಒಪ್ಪಿಗೆ ಮತ್ತು ಕೇಂದ್ರ ಸರ್ಕಾರದ ಅನುಮೋದನೆಯಿಲ್ಲದೆ ಹೊಸ ಅಣೆಕಟ್ಟು ಅಥವಾ ನೀರು ಸಂಗ್ರಹಣಾ ಯೋಜನೆಗಳನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಇದರ ಜೊತೆಗೆ, ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗ ಪರಿಶೀಲಿಸಬಾರದು, ಪ್ರಕ್ರಿಯೆಗೊಳಿಸಬಾರದು ಅಥವಾ ಅನುಮೋದಿಸಬಾರದು ಎಂದು ತಮಿಳುನಾಡು ಸರ್ಕಾರ ಕೇಂದ್ರವನ್ನು ಆಗ್ರಹಿಸಿದೆ. ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಒಡಿಶಾ ಪಠ್ಯಪುಸ್ತಕಗಳಲ್ಲಿ 1,678 ದೋಷಗಳು: ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

ಮೇಕೆದಾಟು ಯೋಜನೆಯು ಕರ್ನಾಟಕಕ್ಕೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಕರ್ನಾಟಕ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೆ, ತಮಿಳುನಾಡು ಈ ಯೋಜನೆಯು ಕಾವೇರಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಈ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿರುವುದು, ಮೇಕೆದಾಟು ಯೋಜನೆ ಕುರಿತಂತೆ ರಾಜ್ಯದ ರಾಜಕೀಯ ಪಕ್ಷಗಳ ಏಕಮತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ವಿವಾದದ ಚರ್ಚೆಗೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ.