SK Home Ad
Home ಕೃಷಿ/ವಾಣಿಜ್ಯ ಡಬ್ಲ್ಯುಐಪಿಒ ಪೇಟೆಂಟ್ಸ್ ರ್‍ಯಾಂಕಿಂಗ್‌‌: ಟಾಪ್ 20 ಪಟ್ಟಿಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಗ್ಗೆ

ಡಬ್ಲ್ಯುಐಪಿಒ ಪೇಟೆಂಟ್ಸ್ ರ್‍ಯಾಂಕಿಂಗ್‌‌: ಟಾಪ್ 20 ಪಟ್ಟಿಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಗ್ಗೆ

0
81

ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ತಂತ್ರಜ್ಞಾನ ಅಂಗವಾಗಿರುವ ಜಿಯೋ ಪ್ಲಾಟ್‌ಫಾರ್ಮ್ಸ್, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಇತ್ತೀಚೆಗೆ ಬಿಡುಗಡೆ ಮಾಡಿರುವ ಪೇಟೆಂಟ್ ಸಹಕಾರ ಒಪ್ಪಂದ (ಪಿಸಿಟಿ) ರ್‍ಯಾಂಕಿಂಗ್‌‌ನಲ್ಲಿ ಜಾಗತಿಕವಾಗಿ ಟಾಪ್ 20ರ ಪಟ್ಟಿಗೆ ಲಗ್ಗೆ ಇಟ್ಟಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್ (ಜಿಪಿಎಲ್) 2025ರ ಸಾಲಿನ ಪಟ್ಟಿಯಲ್ಲಿ ಬರೊಬ್ಬರಿ 320 ಸ್ಥಾನಗಳ ಮೇಲಕ್ಕೇರಿದೆ. ಈ ಮೂಲಕ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾವೀನ್ಯತಾ (ಇನ್ನೋವೇಶನ್) ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಲ್ಲದೆ, ಹುವಾಯ್‌, ಸ್ಯಾಮ್‌ಸಂಗ್, ಕ್ವಾಲ್ಕಾಮ್, ಎಲ್‌ಜಿ, ಪ್ಯಾನಾಸೋನಿಕ್, ನೋಕಿಯಾ, ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ವಿಶ್ವದ ಗಣ್ಯ ತಂತ್ರಜ್ಞಾನ ದೈತ್ಯರ ಸಾಲಿಗೆ ಜಿಯೋ ಸೇರಿದೆ.

ಇದರೊಂದಿಗೆ, ಜಾಗತಿಕ ಟಾಪ್-20 ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ತಂತ್ರಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಪಾತ್ರವಾಗಿದೆ. ಪ್ರಕಟಿತ ಡೇಟಾ ಆಧಾರದ ಮೇಲೆ ಅಗ್ರ PCT ಅರ್ಜಿದಾರರನ್ನು ಈ ವರದಿ ಶ್ರೇಯಾಂಕೀಕರಿಸುತ್ತದೆ ಎಂದು ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಯೋ ಸಂಸ್ಥೆಯ ಪೇಟೆಂಟ್ ಪೋರ್ಟ್‌ಫೋಲಿಯೋ ಮುಖ್ಯವಾಗಿ ಮುಂದಿನ ಪೀಳಿಗೆಯ ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತವಾಗಿದೆ. ಇದರಲ್ಲಿ 5G, 5G ಅಡ್ವಾನ್ಸ್ಡ್, 6G, ಕೃತಕ ಬುದ್ಧಿಮತ್ತೆ (AI), AI-ನೇಟಿವ್ ನೆಟ್‌ವರ್ಕ್‌ಗಳು, ಕ್ಲೌಡ್-ನೇಟಿವ್ ಪ್ಲಾಟ್‌ಫಾರ್ಮ್‌ಗಳು, ಇಂಟೆಲಿಜೆಂಟ್ ಆಟೊಮೇಷನ್, ರೇಡಿಯೋ ಆಕ್ಸೆಸ್, ಕೋರ್ ನೆಟ್‌ವರ್ಕ್ ಸಾಫ್ಟ್‌ವೇರ್, ಎಡ್ಜ್ ಇಂಟೆಲಿಜೆನ್ಸ್, ಫಿಕ್ಸ್ಡ್ ವೈರ್‌ಲೆಸ್ ಆಕ್ಸೆಸ್, ನೆಟ್‌ವರ್ಕ್ ಸ್ಲೈಸಿಂಗ್ ಮತ್ತು ಡಿಜಿಟಲ್ ಸೇವೆಗಳ ಮೂಲಸೌಕರ್ಯಗಳು ಸೇರಿವೆ.

ಡಬ್ಲ್ಯುಐಪಿಒ ಪಿಸಿಟಿ ರ್‍ಯಾಂಕಿಂಗ್‌ ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಜಾಗತಿಕ ಮಟ್ಟದಲ್ಲಿ ಟಾಪ್ 20ರೊಳಗೆ ಸ್ಥಾನ ಪಡೆದಿರುವ ಕುರಿತು ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ, “ಇದು ಜಿಯೋ ಸಂಸ್ಥೆಯನ್ನು ಡೀಪ್-ಟೆಕ್ ಕಂಪನಿಯಾಗಿ ಪರಿವರ್ತಿಸಲು ಹಲವು ವರ್ಷಗಳಿಂದ ನಡೆಸಿದ ಪ್ರಯತ್ನಗಳ ಪ್ರತಿಫಲವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಇದು ಹಲವಾರು ಮುಂದುವರಿದ ತಂತ್ರಜ್ಞಾನಗಳಲ್ಲಿ ಜಿಯೋ ಹೊಂದಿರುವ ನಾವೀನ್ಯತೆಯ ವೇಗವನ್ನು ಪ್ರದರ್ಶಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಬೆಳೆಯಲಿದೆ. ಭಾರತವನ್ನು ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದ ನಾಯಕ ಮತ್ತು ರಫ್ತುದಾರನನ್ನಾಗಿ ಮಾಡಲು ಆಶಿಸುವ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ದ ದೂರದೃಷ್ಟಿಗೆ ಈ ಸಾಧನೆಯ ಯಶಸ್ಸನ್ನು ಅರ್ಪಿಸಲು ನಾನು ಬಯಸುತ್ತೇನೆ,” ಎಂದು ಅವರು ಹೇಳಿದರು. ಮುಂದುವರಿದು, “ಭಾರತವನ್ನು ಜಾಗತಿಕ ಡೀಪ್-ಟೆಕ್ ಪವರ್‌ಹೌಸ್ ಮಾಡುವ ನಿಟ್ಟಿನಲ್ಲಿ ಈ ಕೊಡುಗೆ ನೀಡುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ” ಎಂದರು.

ಜಾಗತಿಕವಾಗಿ ಪಿಸಿಟಿ ಸಲ್ಲಿಕೆಗಳು ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಬೆಳವಣಿಗೆ ದಾಖಲಿಸಿದ ವರ್ಷದಲ್ಲಿ, ಜಿಯೋ ಪ್ಲಾಟ್‌ಫಾರ್ಮ್ಸ್ 320 ಸ್ಥಾನಗಳ ಭಾರಿ ಜಿಗಿತ ಕಂಡು 20ನೇ ಸ್ಥಾನಕ್ಕೆ ತಲುಪಿರುವುದು ವಿಶೇಷ.

“ಈ ಡಬ್ಲ್ಯುಐಪಿಒ ರ್‍ಯಾಂಕಿಂಗ್‌ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಸಂಶೋಧನೆ ಮತ್ತು ಅಭಿವೃದ್ಧಿಯ ಉತ್ಪಾದಕತೆ ಮತ್ತು ಬೌದ್ಧಿಕ ಆಸ್ತಿಗೆ ಸಿಕ್ಕ ಪ್ರಮುಖ ಮನ್ನಣೆಯಾಗಿದೆ,” ಎಂದು ಕಂಪನಿ ತಿಳಿಸಿದೆ. ಇದು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಭದ್ರವಾದ ಸ್ಥಾನವನ್ನು ಒದಗಿಸಿದೆʼʼ ಎಂದು ಪ್ರಕಟಣೆ ತಿಳಿಸಿದೆ.

2026 ಮಾರ್ಚ್ 31ರ ವೇಳೆಗೆ ಜಿಯೋ ಪ್ಲಾಟ್‌ಫಾರ್ಮ್ಸ್ ಒಟ್ಟಾರೆಯಾಗಿ 6,817 ಪೇಟೆಂಟ್‌ಗಳನ್ನು ಸಲ್ಲಿಸಿದೆ. ಇವುಗಳಲ್ಲಿ 2,393 ಪೇಟೆಂಟ್‌ಗಳನ್ನು ಭಾರತದಲ್ಲಿ ಮತ್ತು 4,424 ಪೇಟೆಂಟ್‌ಗಳನ್ನು ವಿದೇಶಗಳಲ್ಲಿ ಸಲ್ಲಿಸಲಾಗಿದೆ. ಕಂಪನಿಯ ಪ್ರಕಾರ, ಜಾಗತಿಕವಾಗಿ ಒಟ್ಟು 1,009 ಪೇಟೆಂಟ್‌ಗಳು ಮಂಜೂರಾಗಿದ್ದು, ಇವುಗಳಲ್ಲಿ 538 ಭಾರತದಲ್ಲಿ ಮತ್ತು 471 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಂಜೂರಾಗಿವೆ.