ಭಾರತೀಯ IT ವೃತ್ತಿಪರರಿಗೆ ಭಾರೀ ನೆಮ್ಮದಿ, ಅಮೆರಿಕ ಫೆಡರಲ್ ಕೋರ್ಟ್ ಐತಿಹಾಸಿಕ ತೀರ್ಪು : H-1B ವೀಸಾ ಅರ್ಜಿದಾರರಿಗೆ ದೊಡ್ಡ ಜಯ – $1,00,000 ಹೆಚ್ಚುವರಿ ಶುಲ್ಕ ಕಾನೂನುಬಾಹಿರ ಎಂದ ಕೋರ್ಟ್
ವಾಷಿಂಗ್ಟನ್ : ಅಮೆರಿಕದಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಸಾವಿರಾರು ಭಾರತೀಯ ಐಟಿ ವೃತ್ತಿಪರರು, ಸಂಶೋಧಕರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರಿಗೆ ಮಹತ್ವದ ನೆಮ್ಮದಿ ನೀಡುವ ತೀರ್ಪೊಂದನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ನೀಡಿದೆ. ಹೊಸ H-1B ವೀಸಾ ಅರ್ಜಿಗಳ ಮೇಲೆ ವಾರ್ಷಿಕವಾಗಿ 1,00,000 ಡಾಲರ್ (ಸುಮಾರು ₹96 ಲಕ್ಷ) ಹೆಚ್ಚುವರಿ ಶುಲ್ಕ ವಿಧಿಸಲು ಟ್ರಂಪ್ ಆಡಳಿತ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರವನ್ನು ಬೋಸ್ಟನ್ ಜಿಲ್ಲಾ ನ್ಯಾಯಾಲಯ ಕಾನೂನುಬಾಹಿರ ಎಂದು ಘೋಷಿಸಿ ರದ್ದುಗೊಳಿಸಿದೆ.
ಫೆಡರಲ್ ನ್ಯಾಯಾಧೀಶ ಲಿಯೋ ಸೊರೊಕಿನ್ ಅವರು ನೀಡಿರುವ 42 ಪುಟಗಳ ಸುದೀರ್ಘ ತೀರ್ಪಿನಲ್ಲಿ, ಈ ಶುಲ್ಕವನ್ನು ಆಡಳಿತಾತ್ಮಕ ಶುಲ್ಕ ಅಥವಾ ದಂಡ ಎಂದು ಕರೆಯಲಾಗಿದ್ದರೂ, ಅದರ ಸ್ವರೂಪ ಮತ್ತು ಪರಿಣಾಮಗಳನ್ನು ಪರಿಶೀಲಿಸಿದಾಗ ಇದು ವಾಸ್ತವದಲ್ಲಿ ಹೊಸ ತೆರಿಗೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯದ ಅಭಿಪ್ರಾಯದಂತೆ, ಅಮೆರಿಕ ಸಂವಿಧಾನದ ಪ್ರಕಾರ ಹೊಸ ತೆರಿಗೆ ವಿಧಿಸುವ ಅಧಿಕಾರ ಕೇವಲ ಅಮೆರಿಕ ಕಾಂಗ್ರೆಸ್‌ಗೆ ಮಾತ್ರ ಇದೆ. ಅಧ್ಯಕ್ಷರಿಗೆ ಅಥವಾ ಕಾರ್ಯಾಂಗಕ್ಕೆ ಸಂಸತ್ತಿನ ಅನುಮೋದನೆ ಇಲ್ಲದೆ ಇಂತಹ ತೆರಿಗೆ ಜಾರಿಗೆ ತರುವ ಅಧಿಕಾರ ಇಲ್ಲ. ಹೀಗಾಗಿ ಟ್ರಂಪ್ ಆಡಳಿತ ಜಾರಿಗೆ ತರಲು ಮುಂದಾಗಿದ್ದ ಈ ವೀಸಾ ಶುಲ್ಕ ವ್ಯವಸ್ಥೆ ಅಸಂವಿಧಾನಿಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಏನಿತ್ತು ವಿವಾದ? : ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಕೌಶಲ್ಯಯುತ ವಿದೇಶಿ ಉದ್ಯೋಗಿಗಳಿಗೆ ನೀಡುವ H-1B ವೀಸಾ ಯೋಜನೆಗೆ ಕಠಿಣ ನಿಯಮಗಳನ್ನು ತರಲು ಮುಂದಾಗಿತ್ತು. ಇದರ ಭಾಗವಾಗಿ ಈಗಾಗಲೇ ಅಸ್ತಿತ್ವದಲ್ಲಿದ್ದ ಶುಲ್ಕವನ್ನು 25 ರಿಂದ 50 ಪಟ್ಟು ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು.
ಈ ಕ್ರಮದ ವಿರುದ್ಧ ಕ್ಯಾಲಿಫೋರ್ನಿಯಾ ನೇತೃತ್ವದ 20 ಡೆಮಾಕ್ರಟಿಕ್ ರಾಜ್ಯಗಳ ಅಟಾರ್ನಿ ಜನರಲ್‌ಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಹೆಚ್ಚುವರಿ ಶುಲ್ಕ ವಿಧಿಸುವ ಕ್ರಮಕ್ಕೆ ಕಾನೂನಾತ್ಮಕ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ: ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ವಿಶ್ವವಿದ್ಯಾಲಯಗಳು ಈ ಶುಲ್ಕ ಏರಿಕೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದವು. ಏಕೆಂದರೆ H-1B ವೀಸಾ ಯೋಜನೆಯ ಮೂಲಕವೇ ಸಾವಿರಾರು ವಿದೇಶಿ ತಜ್ಞರು ಅಮೆರಿಕದ ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಾರೆ.
ಅಮೆರಿಕದ ವಲಸೆ ಮತ್ತು ನಾಗರಿಕ ಸೇವೆಗಳ ಇಲಾಖೆ (USCIS) ವರದಿಯ ಪ್ರಕಾರ, ಭಾರೀ ಶುಲ್ಕದ ಭೀತಿಯಿಂದ ದೇಶದಾದ್ಯಂತ ಕೇವಲ 85 ಕಂಪನಿಗಳು ಮಾತ್ರ ಹೊಸ ವೀಸಾ ಅರ್ಜಿಗಳಿಗೆ ಮುಂದಾಗಿದ್ದವು. ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ್ಯಯುತ ಮಾನವ ಸಂಪನ್ಮೂಲದ ಕೊರತೆ ಉಂಟಾಗುವ ಆತಂಕವೂ ವ್ಯಕ್ತವಾಗಿತ್ತು.
ಭಾರತೀಯರಿಗೆ ಅತಿ ಹೆಚ್ಚಿನ ಲಾಭ : ಪ್ರತಿವರ್ಷ ಅಮೆರಿಕ ಸರ್ಕಾರ H-1B ಯೋಜನೆಯಡಿ 65,000 ಸಾಮಾನ್ಯ ವೀಸಾಗಳು ಹಾಗೂ ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗಾಗಿ ಹೆಚ್ಚುವರಿಯಾಗಿ 20,000 ವೀಸಾಗಳನ್ನು ನೀಡುತ್ತದೆ. ಈ ವೀಸಾಗಳಲ್ಲಿ 70 ಶೇಕಡಕ್ಕೂ ಹೆಚ್ಚು ಭಾರತೀಯ ಐಟಿ ವೃತ್ತಿಪರರು ಮತ್ತು ತಾಂತ್ರಿಕ ತಜ್ಞರ ಪಾಲಾಗುತ್ತವೆ.
ಹೀಗಾಗಿ ಶುಲ್ಕ ಏರಿಕೆ ರದ್ದಾಗಿರುವುದು ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ, ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಅತ್ಯಂತ ದೊಡ್ಡ ನೆಮ್ಮದಿಯಾಗಿದೆ. ಅಮೆರಿಕದಲ್ಲಿ ಉದ್ಯೋಗ ಹಾಗೂ ವೃತ್ತಿಜೀವನ ಕಟ್ಟಿಕೊಳ್ಳುವ ಅವರ ಕನಸಿಗೆ ಈ ತೀರ್ಪು ಮತ್ತಷ್ಟು ಬಲ ತುಂಬಿದೆ.
ಮೇಲ್ಮನವಿಗೆ ಟ್ರಂಪ್ ಆಡಳಿತ ಸಿದ್ಧ : ನ್ಯಾಯಾಲಯದ ತೀರ್ಪಿನ ವಿರುದ್ಧ ಅಮೆರಿಕದ ಗೃಹ ಭದ್ರತಾ ಇಲಾಖೆ ಮತ್ತು ವೈಟ್ ಹೌಸ್ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳೀಯ ಅಮೆರಿಕನ್ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ತರಲಾಗಿತ್ತು ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಆದರೆ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಆಡಳಿತ ಸಿದ್ಧತೆ ನಡೆಸಿದೆ. ಹೀಗಾಗಿ ಈ ವಿಚಾರ ಮುಂದಿನ ದಿನಗಳಲ್ಲಿ ಮೇಲಿನ ನ್ಯಾಯಾಲಯಗಳಲ್ಲೂ ಚರ್ಚೆಗೆ ಬರಬಹುದಾಗಿದೆ.
ಸದ್ಯಕ್ಕೆ ಹಳೆಯ ನಿಯಮಗಳೇ ಜಾರಿ : ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ H-1B ವೀಸಾ ಅರ್ಜಿ ಪ್ರಕ್ರಿಯೆ ಹಳೆಯ ನಿಯಮಗಳ ಪ್ರಕಾರವೇ ಮುಂದುವರಿಯಲಿದೆ. ಇದರಿಂದ ಅಮೆರಿಕದ ತಂತ್ರಜ್ಞಾನ ಉದ್ಯಮ ಹಾಗೂ ಭಾರತೀಯ ಐಟಿ ವಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ವೀಸಾ ಪ್ರಕ್ರಿಯೆ ಮತ್ತೆ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.





















