ಬೀದರ್: ಬಕ್ರೀದ್ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ಬೆಂಗಳೂರಿನ 42ನೇ ಎಸಿಜೆಎಂ (ವಿಶೇಷ ಜನಪ್ರತಿನಿಧಿಗಳ) ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.
2023ರ ಜುಲೈ 1ರಂದು ಬಸವಕಲ್ಯಾಣ ನಗರದಲ್ಲಿ ಬಕ್ರೀದ್ ಸಂದರ್ಭದಲ್ಲಿ ಶಾಸಕ ಸಲಗರ್ ಅವರು ಅಕ್ರಮ ಗೋಹತ್ಯೆ ನಡೆದಿದೆ ಎಂದು ಬಡಾವಣೆಯ ಮುಸ್ಲಿಂ ಓಣಿ ಹಾಗೂ ಅಲ್ಲಿನ ಮನೆಯೊಂದಕ್ಕೆ ನುಗ್ಗಿದ್ದರು. ಇದಕ್ಕೆ ಸ್ಥಳೀಯ ಕೆಲವರು ತಗಾದೆ ತೆಗೆದು ಅನಧಿಕೃತವಾಗಿ ಶಾಸಕರು ಪ್ರವೇಶಿಸಿದ್ದಾರೆ ಎಂದು ದೂರಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ಶಾಸಕರು ಪದೇ ಪದೆ ಗೈರು ಹಾಜರಾದ ಕಾರಣ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ಅಕ್ರಮ ಗೋಹತ್ಯೆ ತಡೆಯಲು ತಾವು ನಿಯಮಬದ್ಧ ಹೆಜ್ಜೆ ಇಟ್ಟ ಬಗ್ಗೆ ಶಾಸಕ ಸಲಗರ್ ಹೇಳಿದ್ದರು. ನಿಯಮಬಾಹಿರ ಗೋಹತ್ಯೆಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಮುಸ್ಲಿಂ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಪ್ರಕರಣ ಭಾರಿ ಗುಲ್ಲೆಬ್ಬಿಸಿತ್ತು. ಕೋರ್ಟ್ ವಾರೆಂಟ್ ಬಳಿಕ ಶಾಸಕರಿಗೆ ಬಂಧನದ ಭೀತಿ ಆವರಿಸಿದೆ. ಸ್ಥಳೀಯ ಪೊಲೀಸರು ಶನಿವಾರ ಶಾಸಕರ ಮನೆಗೆ ಭೇಟಿ ನೀಡಿದ್ದರು. ಆದರೆ ಶಾಸಕರು ಇರಲಿಲ್ಲ. ಪ್ರಕರಣದ ಮುಂದಿನ ವಿಚಾರಣೆ ಜೂ. 18ಕ್ಕೆ ನಡೆಯಲಿದೆ.






















