Home Advertisement
Home ಅಪರಾಧ ಅಪಹರಿಸಲು ಯತ್ನಿಸಿದವನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರೆಚಿದ ಯುವತಿ

ಅಪಹರಿಸಲು ಯತ್ನಿಸಿದವನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರೆಚಿದ ಯುವತಿ

0
124

ಪಣಜಿ(ಮಾಪ್ಸಾ): ಘಟೇಶ್ವರನಗರ ಖೋರ್ಲಿಯಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಗೆ ಕಾಳುಮೆಣಸಿನ ಪುಡಿ ಹಾಗೂ ಪೆಪ್ಪರ್ ಸ್ಪ್ರೇನಿಂದ ಹೊಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪದ ಮೇಲೆ ಮಾಪ್ಸಾ ಪೊಲೀಸರು ಆರೋಪಿ ಯೂಸುಫ್ ಶೇಖ್‌ನನ್ನು ಬಂಧಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ೧.೪೫ರ ಸುಮಾರಿಗೆ ಘಟೇಶ್ವರನಗರದಲ್ಲಿ ಈ ಘಟನೆ ನಡೆದಿದೆ. ಮಾಪ್ಸಾ ಪೊಲೀಸರು ಶಂಕಿತ ಯೂಸುಯ್ ಶೇಖ್‌ನನ್ನು ರಾತ್ರಿ ೧೦ ಗಂಟೆಗೆ ಬಂಧಿಸಿದ್ದಾರೆ. ಯೂಸುಫ್ ಮಧ್ಯಾಹ್ನ ಯುವತಿಯನ್ನು ಭೇಟಿಯಾಗಲು ಬಂದಿದ್ದ ಮತ್ತು ತನ್ನೊಂದಿಗೆ ಬರುವಂತೆ ಒತ್ತಾಯಿಸಲು ಪ್ರಾರಂಭಿಸಿದ. ಯುವತಿ ನಿರಾಕರಿಸಿದಾಗ ಎಳೆದುಕೊಂಡು ಹೋಗಲು ಪ್ರಯತ್ನಿಸಿದ. ಆಕೆ ತನ್ನ ಬ್ಯಾಗ್‌ನಿಂದ ಪೆಪ್ಪರ್ ಸ್ಪ್ರೇ ತೆಗೆದು ಕಣ್ಣಿಗೆ ಎರೆಚಿದ್ದಾಳೆ ಮತ್ತು ಹಲ್ಲೆ ನಡೆಸಿದ್ದಾಳೆ. ಯುವತಿಯ ಪ್ರತಿರೋಧಕ್ಕೆ ಹಿಮ್ಮಟ್ಟಿದ ಆರೋಪಿ ತನ್ನ ಕಾರು ಮತ್ತು ಮೊಬೈಲ್ ಫೋನ್ ಅಲ್ಲೇ ಎಸೆದು ಪರಾರಿಯಾಗಿದ್ದಾನೆ.
ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆಯುದ್ದಕ್ಕೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಕಷ್ಟು ಜನರು ನಡೆದುಕೊಂಡು ಹೋಗುತ್ತಿದ್ದರು. ಆದರೆ ಸಹಾಯಕ್ಕೆ ಬರಲಿಲ್ಲ. ಕೆಲವರು ಈ ಘಟನೆಯನ್ನು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ಘಟನೆಯ ಮಾಹಿತಿ ಲಭ್ಯವಾದ ನಂತರ ಪೊಲೀಸರು ಯುವತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಡಿಸ್ಚಾರ್ಜ್ ಆದ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ.