Home Advertisement
Home ಸುದ್ದಿ ದೇಶ ಬಂಗಾಳದಲ್ಲಿ ದೀದಿ ಸೋಲಿಸೋಕೆ ‘ಒಳ್ಳೆ ಹುಡುಗ’ ಪ್ರಥಮ್ ವಿಚಿತ್ರ ಹರಕೆ; ಈಶ್ವರನ ಸಾಕ್ಷಿಯಾಗಿ ಪೋಸ್ಟ್!

ಬಂಗಾಳದಲ್ಲಿ ದೀದಿ ಸೋಲಿಸೋಕೆ ‘ಒಳ್ಳೆ ಹುಡುಗ’ ಪ್ರಥಮ್ ವಿಚಿತ್ರ ಹರಕೆ; ಈಶ್ವರನ ಸಾಕ್ಷಿಯಾಗಿ ಪೋಸ್ಟ್!

0
145

ಬೆಂಗಳೂರು: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮತ ಎಣಿಕೆಯ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟ ‘ಒಳ್ಳೆ ಹುಡುಗ’ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಸೋಲಲಿ ಎಂದು ದೇವರಲ್ಲಿ ವಿಶೇಷವಾಗಿ ಹರಕೆ ಹೊತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ವೈಯಕ್ತಿಕ ಲಾಭಕ್ಕಲ್ಲ, ನನ್ನ ದೇಶದ ಜನಕ್ಕಾಗಿ ಹರಕೆ: ತಮ್ಮ ಪೋಸ್ಟ್‌ನಲ್ಲಿ ವಿಷಯ ಹಂಚಿಕೊಂಡಿರುವ ಪ್ರಥಮ್, “ನನಗೆ ಇಂತಹದ್ದೇ ಮಕ್ಕಳಾಗಬೇಕು ಅಥವಾ ನನ್ನ ಸಿನಿಮಾ ಗೆಲ್ಲಬೇಕು ಎಂದು ನಾನು ಯಾವತ್ತೂ ದೇವರಲ್ಲಿ ಹರಕೆ ಹೊತ್ತವನಲ್ಲ. ಆದ್ರೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಲಿ ಎಂದು ಈಶ್ವರನಲ್ಲಿ ಪ್ರಾರ್ಥಿಸುತ್ತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ. ಈ ಹರಕೆಯ ಹಿಂದೆ ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲ, ಬದಲಿಗೆ ದೇಶದ ಹಿತ ಅಡಗಿದೆ ಎಂದು ಸಹ ಬರೆದುಕೊಂಡಿದ್ದಾರೆ.

ಬಾಂಗ್ಲಾ ವಲಸಿಗರ ಮುಕ್ತ ದೇಶವೇ ಗುರಿ: ತಮ್ಮ ಈ ನಿಲುವಿಗೆ ಕಾರಣವನ್ನೂ ನೀಡಿರುವ ಪ್ರಥಮ್, “ನಾನು ರಾಜಕೀಯದಿಂದ ದೂರವಿದ್ದೇನೆ. ಆದ್ರೆ ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತವಾಗಬೇಕು ಮತ್ತು ನಮ್ಮ ದೇಶದ ಜನರು ಸುಖವಾಗಿರಬೇಕು ಎಂಬುದು ನನ್ನ ಆಸೆ. ಈ ಉದ್ದೇಶಕ್ಕಾಗಿಯೇ ಮಮತಾ ಬ್ಯಾನರ್ಜಿ ಪಕ್ಷ
ಈ ಬಾರಿ ಸೋಲಲಿ ಎಂದು ಬೇಡಿಕೊಂಡಿದ್ದೇನೆ,” ಎಂದು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾ ನುಸುಳುಕೋರರ ಸಮಸ್ಯೆಯಿಂದ ದೇಶ ರಕ್ಷಣೆಯಾಗಬೇಕು ಎನ್ನುವುದು ಈ ಫೋಸ್ಟ್‌ ಹಿಂದಿನ ಕಳಕಳಿಯಾಗಿದೆ.

ಸಮಾಜಸೇವೆಯ ಸಂಕಲ್ಪ: ಪಕ್ಷಗಳ ಹಗ್ಗ ಜಗ್ಗಾಟದಂತಿರುವ ಈ ಮತದಾನದಿಂದ ಒಂದು ವೇಳೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಪಕ್ಷ ಸೋತರೆ, ತಾವು ನೂರು ಜನರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಪ್ರಥಮ್ ಭರವಸೆ ನೀಡಿದ್ದಾರೆ. “ಸಮಾಜದಲ್ಲಿ ನನ್ನ ಗುರುತಿಗೆ ಸಿಗುವ ಕಷ್ಟದಲ್ಲಿರುವ ಜನರ ಜೊತೆ ಶಕ್ತಿ ಮೀರಿ ನಿಲ್ಲುತ್ತೇನೆ ಮತ್ತು ಅವರಿಗೆ ಸಹಾಯ ಮಾಡುತ್ತೇನೆ,” ಎಂದು ಈಶ್ವರನ ಸಾಕ್ಷಿಯಾಗಿ ಪೋಸ್ಟ್ ಮಾಡಿದ್ದಾರೆ.

ಒಟ್ಟಾರೆ.. ರಾಜಕೀಯ ವಿದ್ಯಮಾನವೊಂದಕ್ಕೆ ನಟ ಪ್ರಥಮ್ ಸಮಾಜಸೇವೆಯ ಹರಕೆ ಹೊತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ.