ಸಾಮಾನ್ಯವಾಗಿ ಜನರು ದೈವಿಕ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಕರುಂಗಾಲಿ, ತುಳಸಿ ಹಾಗೂ ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಹಾಗೇ ಇದು ಸನಾತನ ಧರ್ಮದಲ್ಲಿ ವಿವಿಧ ರೀತಿಯ ನೈಸರ್ಗಿಕ ಮಾಲೆಗಳನ್ನು ಧರಿಸುವುದಕ್ಕೆ ವಿಶೇಷ ಮಹತ್ವವಿದೆ. ಆದ್ರೆ ಕೆಲವರು ಇವುಗಳನ್ನು ಫ್ಯಾಶನ್‌ಗಾಗಿಯು ಧರಿಸುತ್ತಾರೆ. ಯಾರು ಯಾವ ತರಹದ ಮಾಲೆ ಧರಿಸಬೇಕು ಎಂದು ತಿಳಿದು ಹಾಕುವ ಸಮಯಪ್ರಜ್ಞ ಕಡಿಮೆ ಅಗಿದೆ.
ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಮಾನಸಿಕ ಶಾಂತಿಗಾಗಿ ಕರುಂಗಾಲಿ (ಕರಿಗಾಲಿ), ತುಳಸಿ ಮತ್ತು ರುದ್ರಾಕ್ಷಿ ಮಾಲೆಗಳನ್ನು ಧರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವು ಕೇವಲ ಧಾರ್ಮಿಕ ನಂಬಿಕೆಯಲ್ಲ, ಬದಲಿಗೆ ವೈಜ್ಞಾನಿಕವಾಗಿ ಮತ್ತು ದೈಹಿಕವಾಗಿ ಮನುಷ್ಯನ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.
ಕರುಂಗಾಲಿ ಮಾಲೆಯ ಪವಾಡ: ಕರುಂಗಾಲಿ ಅಥವಾ ಬ್ಲ್ಯಾಕ್ ಎಬೊನಿ ಮರದಿಂದ ತಯಾರಾಗುವ ಈ ಮಾಲೆಗೆ ನಕಾರಾತ್ಮಕ ಶಕ್ತಿಯನ್ನು ದೂರವಿಡುವ ಅದ್ಭುತ ಸಾಮರ್ಥ್ಯವಿದೆ. ಇದನ್ನು ಧರಿಸುವುದರಿಂದ ಜಾತಕದಲ್ಲಿನ ಕುಜ (ಮಂಗಳ) ದೋಷ ನಿವಾರಣೆಯಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಯಶಸ್ಸು, ಮಾನಸಿಕ ಧೈರ್ಯ ಹಾಗೂ ಕೋಪ ನಿಯಂತ್ರಣಕ್ಕೆ ಕರುಂಗಾಲಿ ಮಾಲೆ ಅತ್ಯುತ್ತಮ ಪರಿಣಾಮ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ತುಳಸಿ ಮಾಲೆಯ ಶಕ್ತಿ: ಮಹಾವಿಷ್ಣು ಹಾಗೂ ಕೃಷ್ಣನಿಗೆ ಪ್ರಿಯವಾದ ತುಳಸಿ ಮಾಲೆಯನ್ನು ಧರಿಸುವುದರಿಂದ ಮನಸ್ಸು ಅತ್ಯಂತ ಪ್ರಶಾಂತವಾಗುತ್ತದೆ. ಆಯುರ್ವೇದದ ಪ್ರಕಾರ, ತುಳಸಿ ಮಣಿಗಳು ಚರ್ಮಕ್ಕೆ ಸ್ಪರ್ಶಿಸುವುದರಿಂದ ರಕ್ತದೊತ್ತಡ (BP) ನಿಯಂತ್ರಣದಲ್ಲಿರುತ್ತದೆ ಮತ್ತು ಧರಿಸಿದವರಲ್ಲಿ ಸತ್ವ ಗುಣ ಹೆಚ್ಚುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ರುದ್ರಾಕ್ಷಿ ಮಾಲೆಯ ಮಹಿಮೆ: ಶಿವನ ಕಣ್ಣೀರಿನಿಂದ ಉದ್ಭವಿಸಿದ ರುದ್ರಾಕ್ಷಿ ಮಾಲೆಯು ದೈವಿಕ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಇದು ದೇಹದ ವಿದ್ಯುತ್ಕಾಂತೀಯ ವಲಯವನ್ನು (Electromagnetic field) ಸಮತೋಲನದಲ್ಲಿಡುತ್ತದೆ. ಹೃದಯದ ಆರೋಗ್ಯ ಸುಧಾರಿಸಲು, ನರಮಂಡಲವನ್ನು ಶಾಂತಗೊಳಿಸಲು ಮತ್ತು ಅಕಾಲಿಕ ಮರಣದ ಭಯವನ್ನು ಹೋಗಲಾಡಿಸಲು ರುದ್ರಾಕ್ಷಿ ಸಹಕಾರಿಯಾಗಿದೆ. ನಿರ್ಭಯತೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಇದು ರಹದಾರಿಯಾಗಿದೆ.
ಒಟ್ಟಾರೆಯಾಗಿ, ಈ ಮಾಲೆಗಳು ಕೇವಲ ಅಲಂಕಾರಿಕ ವಸ್ತುವಲ್ಲ. ನಿಯಮಬದ್ಧವಾಗಿ, ಶುದ್ಧತೆಯಿಂದ ಇವುಗಳನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸು, ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.






















