Home Advertisement
Home ಸುದ್ದಿ ರಾಜ್ಯ ವಿಜಯಪುರ: ಜಪಾನ್ ಮಾವು ಬೆಳೆದು ಗಮನ ಸೆಳೆದ ರೈತ ಮಹಿಳೆ-ಮಿಯಾಝಕಿ ಹಣ್ಣು ಸಚಿವರಿಗೆ ಉಡುಗೊರೆ

ವಿಜಯಪುರ: ಜಪಾನ್ ಮಾವು ಬೆಳೆದು ಗಮನ ಸೆಳೆದ ರೈತ ಮಹಿಳೆ-ಮಿಯಾಝಕಿ ಹಣ್ಣು ಸಚಿವರಿಗೆ ಉಡುಗೊರೆ

0
87

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರೈತ ಮಹಿಳೆ ರಾಜಶ್ರೀ ಅನಂತ ಜೈನ್ ಅವರು ಅಪರೂಪದ ಹಾಗೂ ಅತ್ಯಂತ ದುಬಾರಿ ಬೆಲೆಯ ‘ಮಿಯಾಝಕಿ’ ತಳಿಯ ಮಾವಿನ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಜಪಾನ್ ಮೂಲದ ಈ ವಿಶೇಷ ತಳಿ ಮಾವಿನ ಬೆಳೆಗಾರಿಕೆಯಲ್ಲಿ ಅವರು ಸಾಧಿಸಿದ ಯಶಸ್ಸು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ರಾಜಶ್ರೀ ಅವರು ತಮ್ಮ ತೋಟದಲ್ಲಿ ಬೆಳೆದ ಮಿಯಾಝಕಿ ಮಾವುಗಳನ್ನು ಬೃಹತ್ ಕೈಗಾರಿಕಾ ಸಚಿವ ಎಮ್‌. ಬಿ. ಪಾಟೀಲ್‌ ಅವರಿಗೆ ಉಡುಗೊರೆಯಾಗಿ ನೀಡಿ ಸಂತೋಷ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕೃಷಿ ಸಾಧನೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಬಾರಿ ಹೂಡಿಕೆ, ದೊಡ್ಡ ಲಾಭ: ಜಪಾನ್ ಮೂಲದ ಮಿಯಾಝಕಿ ಮಾವಿನ ತಳಿಯನ್ನು ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಪ್ರತಿ ಗಿಡಕ್ಕೆ ಸುಮಾರು ₹10,000 ದರದಲ್ಲಿ ಖರೀದಿಸಿ, ಒಟ್ಟು 25 ಗಿಡಗಳಿಗೆ ಸುಮಾರು ₹2.5 ಲಕ್ಷ ಹೂಡಿಕೆ ಮಾಡಿ ಈ ಪ್ರಯತ್ನ ಆರಂಭಿಸಿದ್ದರು. ಆರಂಭಿಕ ಹೂಡಿಕೆ ಹೆಚ್ಚಿನದಾಗಿದ್ದರೂ, ಇದೀಗ ಈ ಬೆಳೆ ಲಕ್ಷಾಂತರ ರೂಪಾಯಿ ಆದಾಯ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕೃಷಿಯಿಂದ ಉದ್ಯಮದತ್ತ ಹೆಜ್ಜೆ : ರಾಜಶ್ರೀ ಅವರ ಸಾಧನೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, “ಕೃಷಿಕರನ್ನು ಉದ್ಯಮಿಗಳನ್ನಾಗಿಸುವ ನಮ್ಮ ಉದ್ದೇಶಕ್ಕೆ ಇಂತಹ ಪ್ರಯತ್ನಗಳು ಬಲ ನೀಡುತ್ತವೆ. ಇವರ ಸಾಧನೆ ಇತರ ರೈತರಿಗೆ ಪ್ರೇರಣೆಯಾಗಬೇಕು” ಎಂದು ಹೇಳಿದ್ದಾರೆ.

ರಾಜ್ಯದ ರೈತರಿಗೆ ಪ್ರೇರಣೆ : ಮಿಯಾಝಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಬೆಳೆಸಲು ಸೂಕ್ತ ಹವಾಮಾನ, ವಿಶೇಷ ಆರೈಕೆ ಮತ್ತು ತಾಂತ್ರಿಕ ಜ್ಞಾನ ಅಗತ್ಯವಿದೆ. ಇಂತಹ ಸವಾಲುಗಳನ್ನು ಮೀರಿ ಯಶಸ್ವಿಯಾದ ರಾಜಶ್ರೀ ಅವರ ಪ್ರಯತ್ನವು, ಕೃಷಿಯಲ್ಲಿ ನವೀನ ಪ್ರಯೋಗಗಳಿಗೆ ಹೊಸ ದಾರಿ ತೆರೆದಿದೆ.