ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ಜರ್ಮನ್ ಇನ್ಫ್ಲುಯೆನ್ಸರ್ ಲಿಜ್ಜಾಲಾಜ್ ಅವರ ಫೋಟೋವೊಂದಕ್ಕೆ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದದ ನಂತರ ಮೊದಲ ಬಾರಿಗೆ ಈ ಪವರ್ ಕಪಲ್ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ವಿಮಾನ ನಿಲ್ದಾಣದಲ್ಲಿ ಈ ದಂಪತಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಅನುಷ್ಕಾ ಶರ್ಮಾ ಅವರು ಹೂವಿನ ವಿನ್ಯಾಸವಿರುವ ಬಿಳಿ ಕುರ್ತಾ, ಪಲಾಝೊ ಪ್ಯಾಂಟ್ ಮತ್ತು ಹಸಿರು ದುಪಟ್ಟಾ ಧರಿಸಿ ಸರಳ ಹಾಗೂ ಸುಂದರವಾಗಿ ಮಿಂಚಿದ್ದಾರೆ. ವಿಶೇಷವೆಂದರೆ, ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಬ್ಯಾಗ್ ಅನ್ನು ತಾವೇ ಹಿಡಿದುಕೊಂಡು ಹೋಗುವ ಮೂಲಕ ಅಭಿಮಾನಿಗಳಿಂದ ‘ಗ್ರೀನ್ ಫ್ಲಾಗ್’ ಹಸ್ಬೆಂಡ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಆದರೆ, ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ವರ್ತನೆಯಿಂದ ಅನುಷ್ಕಾ ಶರ್ಮಾ ಸ್ವಲ್ಪ ಅಸಮಾಧಾನಗೊಂಡಂತೆ ಕಂಡರು. ಫೋಟೋಗ್ರಾಫರ್‌ಗಳು ಬೆನ್ನಟ್ಟಿದಾಗ ಅವರು ಕಿರಿಕಿರಿ ಅನುಭವಿಸಿ, ‘ರಿಲ್ಯಾಕ್ಸ್, ರಿಲ್ಯಾಕ್ಸ್’ ಎಂದು ಹೇಳುತ್ತಲೇ ಮುಂದೆ ಸಾಗಿದರು. ಕಳೆದ ಗುರುವಾರ ರಾತ್ರಿ ವಿರಾಟ್ ಅವರು ಲಿಜ್ಜಾಲಾಜ್ ಫೋಟೋ ಲೈಕ್ ಮಾಡಿದ ವಿಚಾರವಾಗಿ ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಅದು ಆಕಸ್ಮಿಕವೋ ಅಥವಾ ಅಲ್ಗಾರಿದಮ್ ಸಮಸ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಸದ್ಯಕ್ಕೆ ಈ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಆ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.
2013 ರಲ್ಲಿ ಜಾಹೀರಾತೊಂದರ ಚಿತ್ರೀಕರಣದ ವೇಳೆ ಭೇಟಿಯಾದ ಈ ಜೋಡಿ, 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಈಗ ಇವರಿಗೆ ವಾಮಿಕಾ ಎಂಬ ಮಗಳು ಮತ್ತು ಅಕಾಯ್ ಎಂಬ ಮಗನಿದ್ದು, ಸದಾ ಕಾಲ ತಮ್ಮ ಸುಂದರ ಸಂಸಾರದ ಮೂಲಕ ಸುದ್ದಿಯಲ್ಲಿರುತ್ತಾರೆ.






















