SK Home Ad
Home ಸುದ್ದಿ ರಾಜ್ಯ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಲಯವಾರು ವೇಳಾಪಟ್ಟಿ ಪ್ರಕಟ : ಸೆ 28 ರಿಂದ ದೈಹಿಕ ಪರೀಕ್ಷೆ

ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಲಯವಾರು ವೇಳಾಪಟ್ಟಿ ಪ್ರಕಟ : ಸೆ 28 ರಿಂದ ದೈಹಿಕ ಪರೀಕ್ಷೆ

0
83
ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸುದ್ದಿ: 19,396 ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ದಿನಾಂಕ ಪ್ರಕಟ

ಒಟ್ಟು 3,991 ಹುದ್ದೆಗಳಿಗೆ ಅರ್ಹತೆ ಪಡೆದ 19,396 ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿವರ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ ನೇಮಕಾತಿಗೆ ಸಂಬಂಧಿಸಿದ ದೇಹದಾರ್ಡ್ಯ ಪರೀಕ್ಷೆ (PST) ಮತ್ತು ಸಹಿಷ್ಣುತಾ ಪರೀಕ್ಷೆ (ET) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 3,991 ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಇದರಲ್ಲಿ RPC ವೃಂದದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು, KK ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು PST ಮತ್ತು ETಗೆ ಅರ್ಹರಾಗಿದ್ದಾರೆ. ಪರೀಕ್ಷೆಗಳು ಸೆಪ್ಟೆಂಬರ್ 28ರಿಂದ ವಿವಿಧ ಹಂತಗಳಲ್ಲಿ ಆರಂಭವಾಗಿ ಅಕ್ಟೋಬರ್ ಮಧ್ಯದವರೆಗೆ ನಡೆಯಲಿವೆ.

ಬೆಂಗಳೂರು ನಗರ ಘಟಕದಲ್ಲಿ 2,015 ಹುದ್ದೆಗಳಿಗೆ 9,887 ಅಭ್ಯರ್ಥಿಗಳು ಅರ್ಹರಾಗಿದ್ದು, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ಚಾಮರಾಜಪೇಟೆಯ ಸಿಎಆರ್ (ಹೆಚ್‌ಕ್ಯೂ) ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ತನಿಷಂದ್ರದ ಸಿಎಆರ್ (ಉತ್ತರ) ಪರೇಡ್ ಮೈದಾನಗಳಲ್ಲಿ ಪರೀಕ್ಷೆ ನಡೆಯಲಿದೆ.

ಕೇಂದ್ರ ವಲಯದಲ್ಲಿ 200 ಹುದ್ದೆಗಳಿಗೆ 946 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ಬೆಂಗಳೂರಿನ ಕೊರಮಂಗಲದ 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಿಗದಿಯಾಗಿದೆ.

ದಕ್ಷಿಣ ವಲಯದಲ್ಲಿ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ಮೈಸೂರಿನ ಸಿಟಿ ಆರ್ಮ್ಸ್ ರಿಸರ್ವ್ ಪರೇಡ್ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ. ಪೂರ್ವ ವಲಯದ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6ರವರೆಗೆ ಶಿವಮೊಗ್ಗದ ನವಿಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಪಶ್ಚಿಮ ವಲಯದಲ್ಲಿ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಪರೀಕ್ಷೆ ನಿಗದಿಯಾಗಿದೆ. ಉತ್ತರ ವಲಯದಲ್ಲಿ 110 ಹುದ್ದೆಗಳಿಗೆ 549 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 29 ಮತ್ತು 30ರಂದು ಬೆಳಗಾವಿಯ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಬಳ್ಳಾರಿ ವಲಯದ RPC ಘಟಕಗಳಲ್ಲಿ 30 ಹುದ್ದೆಗಳಿಗೆ 144 ಅಭ್ಯರ್ಥಿಗಳಿಗೆ ಅಕ್ಟೋಬರ್ 5 ಮತ್ತು 6ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ, ಬೆಂಗಳೂರು ನಗರ (KK) ಘಟಕದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳಿಗೆ ಅಕ್ಟೋಬರ್ 8ರಂದು ಚಾಮರಾಜಪೇಟೆ ಮತ್ತು ಆಡುಗೋಡಿ ಸಿಎಆರ್ ಮೈದಾನಗಳಲ್ಲಿ ಪರೀಕ್ಷೆ ನಡೆಯಲಿದೆ. ಬಳ್ಳಾರಿ ವಲಯದ KK ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳಿಗೆ ಅಕ್ಟೋಬರ್ 12ರಿಂದ 15ರವರೆಗೆ ಮುನಿರಾಬಾದ್‌ನ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಈಶಾನ್ಯ ವಲಯದಲ್ಲಿ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳಿಗೆ ಅಕ್ಟೋಬರ್ 12ರಿಂದ 14ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ PST ಮತ್ತು ET ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ಕಾಲ್ ಲೆಟರ್‌ನ್ನು ಅಧಿಕೃತ ನೇಮಕಾತಿ ಪೋರ್ಟಲ್‌ನಲ್ಲಿ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಸಂಬಂಧಿಸಿದ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿದೆ. ಕರ್ನಾಟಕ ಪೊಲೀಸ್ ನೇಮಕಾತಿ ವಿಭಾಗದ ಅಧಿಕೃತ ಪೋರ್ಟಲ್‌ನಲ್ಲಿ ಅಭ್ಯರ್ಥಿಗಳ ಅರ್ಜಿ ಮತ್ತು ನೇಮಕಾತಿ ಸಂಬಂಧಿತ ಮಾಹಿತಿಯನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.