ಕೇರಳ ಸಚಿವ ಸಂಪುಟದಲ್ಲಿ 14 ಹೊಸ ಮುಖಗಳಿಗೆ ಅವಕಾಶ: 20 ಸದಸ್ಯರ ಸಂಪುಟದೊಂದಿಗೆ ಸತೀಶನ್ ಸರ್ಕಾರಕ್ಕೆ ಚಾಲನೆ
ತಿರುವನಂತಪುರ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ತಿರುವನಂತಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಸತೀಶನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಯುಡಿಎಫ್ ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸಿದ್ದರು.
ಯುಡಿಎಫ್ ಮೈತ್ರಿಕೂಟವು 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ್ದರಿಂದ, ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಗೆ ದಾರಿ ಸುಗಮವಾಗಿತ್ತು. ಕಾಂಗ್ರೆಸ್ ಪಕ್ಷವು ಒಟ್ಟು 63 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ ಎಂಟು ಹಾಗೂ ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮೂರು ಸ್ಥಾನಗಳನ್ನು ಪಡೆದಿವೆ.
20 ಸದಸ್ಯರ ಸಂಪುಟದಲ್ಲಿ ಹೊಸ ಮುಖಗಳ ಪ್ರಾಬಲ್ಯ : ವಿ.ಡಿ. ಸತೀಶನ್ ನೇತೃತ್ವದ ಸಚಿವ ಸಂಪುಟದಲ್ಲಿ ಒಟ್ಟು 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇವರಲ್ಲಿ 14 ಮಂದಿ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪರಿಶಿಷ್ಟ ಸಮುದಾಯದ ಪ್ರತಿನಿಧಿಗಳಿಗೆ ಕೂಡ ಅವಕಾಶ ನೀಡಲಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್ ಮತ್ತು ಕೆ. ಮುರಳೀಧರನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇನ್ನು ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್ ಮೊದಲಾದವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿದೆ.
ಮಿತ್ರಪಕ್ಷಗಳಿಗೆ ಸಹ ಸಮರ್ಪಕ ಪ್ರಾತಿನಿಧ್ಯ ನೀಡಲಾಗಿದ್ದು, ಆರ್‌ಎಸ್‌ಪಿ ಮುಖಂಡ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ ನಾಯಕ ಮೋನ್ಸ್ ಜೋಸೆಫ್ ಹಾಗೂ ಅನೂಪ್ ಜಾಕೋಬ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಐಯುಎಂಎಲ್‌ಗೆ ಐದು ಸಚಿವ ಸ್ಥಾನ : ಯುಡಿಎಫ್‌ನ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ಐದು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಪಿ.ಕೆ. ಕುನ್ಹಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್ ಅವರ ಹೆಸರುಗಳನ್ನು ಪಕ್ಷ ಪ್ರಕಟಿಸಿದೆ.
ಹಿರಿಯ ನಾಯಕ ಪರಕ್ಕಲ್ ಅಬ್ದುಲ್ಲಾಗೆ 2.5 ವರ್ಷಗಳ ಬಳಿಕ ಅವಕಾಶ ನೀಡುವುದಾಗಿ ಐಯುಎಂಎಲ್ ನಾಯಕ ಸಾದಿಕ್ ಅಲಿ ಶಿಹಾಬ್ ತಂಗಲ್ ತಿಳಿಸಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಸ್ಪೀಕರ್ ಹಾಗೂ ಉಪಸಭಾಪತಿ ನೇಮಕ : ತಿರುವಾಂಚೂರು ರಾಧಾಕೃಷ್ಣನ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ಹಾಗೂ ಶನಿಮೋಳ್ ಉಸ್ಮಾನ್ ಅವರನ್ನು ಉಪಸಭಾಪತಿಯಾಗಿ ನೇಮಕ ಮಾಡುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಸರಳ ಆಡಳಿತಕ್ಕೆ ಸತೀಶನ್ ಒತ್ತು : ಹೊಸ ಸರ್ಕಾರದ ಆಡಳಿತ ಶೈಲಿಗೆ ಸರಳತೆಯ ಮುದ್ರೆ ಒತ್ತುವ ಪ್ರಯತ್ನವಾಗಿ, ಅನಾವಶ್ಯಕ ಬೆಂಗಾವಲು ವಾಹನಗಳು, ಭದ್ರತಾ ಕಾನ್ವಾಯ್ ಹಾಗೂ ಆಂಬ್ಯುಲೆನ್ಸ್ ಬಳಕೆಯನ್ನು ತಪ್ಪಿಸುವಂತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮಿತವಾದ ಇಂಧನ ಬಳಕೆಯ ಸಲಹೆಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಯುವ ನಾಯಕತ್ವ, ಹೊಸ ಮುಖಗಳು ಹಾಗೂ ಮೈತ್ರಿ ಸಮತೋಲನದೊಂದಿಗೆ ರಚನೆಯಾದ ಸತೀಶನ್ ಸರ್ಕಾರ ರಾಜ್ಯದಲ್ಲಿ ಹೊಸ ರಾಜಕೀಯ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.





















