Home Advertisement
Home ಸುದ್ದಿ ದೇಶ TVK ವಿಜಯ್ ಸರ್ಕಾರದ ಹೊಸ ಅಧ್ಯಾಯ: ಸಚಿವರಿಗೆ ಖಾತೆ ಹಂಚಿಕೆ

TVK ವಿಜಯ್ ಸರ್ಕಾರದ ಹೊಸ ಅಧ್ಯಾಯ: ಸಚಿವರಿಗೆ ಖಾತೆ ಹಂಚಿಕೆ

0
118

ಗೃಹ, ಪೊಲೀಸ್, ಆಡಳಿತ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡ ಸಿಎಂ ವಿಜಯ್

ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ನಟ-ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟವಾಗಿದೆ.

ತಮಿಳುನಾಡು ಲೋಕಭವನ ಶನಿವಾರ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೇರಿದಂತೆ ಒಟ್ಟು 10 ಸಚಿವರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ರಾಜಕೀಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ದಶಕಗಳ ಪರ್ಯಾಯ ಆಡಳಿತಕ್ಕೆ ತೆರೆ ಎಳೆದಿರುವ Tamilaga Vettri Kazhagam (TVK) ಸರ್ಕಾರದ ಮೊದಲ ಪ್ರಮುಖ ಆಡಳಿತಾತ್ಮಕ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗಿದೆ.

ಮುಖ್ಯಮಂತ್ರಿ ವಿಜಯ್ ಗೃಹ, ಪೊಲೀಸ್, ಸಾರ್ವಜನಿಕ ಆಡಳಿತ, ಮಹಿಳಾ ಕಲ್ಯಾಣ ಮತ್ತು ಯುವ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಜೊತೆಗೆ ಕ್ರೀಡಾ ಅಭಿವೃದ್ಧಿಯನ್ನು ಪ್ರತ್ಯೇಕ ಸಚಿವಾಲಯವಾಗಿ ವಿಭಜಿಸಿರುವುದು ಗಮನ ಸೆಳೆದಿದೆ. ಇದು ಹಿಂದಿನ ಡಿಎಂಕೆ ಆಡಳಿತದ ವ್ಯವಸ್ಥೆಯಿಂದ ವಿಭಿನ್ನ ಹೆಜ್ಜೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಅಧಿಕೃತ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ವಿಜಯ್ ಅವರ ವ್ಯಾಪ್ತಿಗೆ ಸಾರ್ವಜನಿಕ ಆಡಳಿತ, ಸಾಮಾನ್ಯ ಆಡಳಿತ, ಐಎಎಸ್, ಐಪಿಎಸ್, ಅರಣ್ಯ ಸೇವೆ, ಜಿಲ್ಲಾ ಕಂದಾಯ ಆಡಳಿತ, ಗೃಹ ಇಲಾಖೆ, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಕಲ್ಯಾಣ, ಯುವ ಕಲ್ಯಾಣ, ಮಕ್ಕಳ ಕಲ್ಯಾಣ, ವೃದ್ಧರು ಮತ್ತು ಅಂಗವಿಕಲರ ಕಲ್ಯಾಣ, ಪುರಸಭೆ ಆಡಳಿತ ಹಾಗೂ ನಗರ ಮತ್ತು ನೀರು ಸರಬರಾಜು ಇಲಾಖೆಗಳು ಸೇರಿವೆ.

ಸಚಿವ ಸಂಪುಟದ ಪ್ರಮುಖ ಖಾತೆ ಹಂಚಿಕೆ ವಿವರಗಳು ಹೀಗಿವೆ:

ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆ
ಆಧವ್ ಅರ್ಜುನ ಅವರಿಗೆ ಲೋಕೋಪಯೋಗಿ ಹಾಗೂ ಕ್ರೀಡಾ ಅಭಿವೃದ್ಧಿ ಇಲಾಖೆ
ಡಾ. ಕೆ.ಜಿ. ಅರುಣ್ ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೆ.ಎ. ಸೆಂಗೋಟ್ಟೈಯನ್ ಅವರಿಗೆ ಹಣಕಾಸು ಇಲಾಖೆ
ಆರ್. ನಿರ್ಮಲ್ ಕುಮಾರ್ ಅವರಿಗೆ ಇಂಧನ ಸಂಪನ್ಮೂಲ ಹಾಗೂ ಕಾನೂನು ಇಲಾಖೆ
ರಾಜಮೋಹನ್ ಅವರಿಗೆ ಶಾಲಾ ಶಿಕ್ಷಣ, ಮಾಹಿತಿ ಮತ್ತು ಪ್ರಚಾರ ಹಾಗೂ ತಮಿಳು ಅಭಿವೃದ್ಧಿ ಮತ್ತು ಪುರಾತತ್ವ ಇಲಾಖೆ
ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆ
ಪಿ. ವೆಂಕಟರಾಮನ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಟಿ.ಕೆ. ಪ್ರಭು ಅವರಿಗೆ ನೈಸರ್ಗಿಕ ಸಂಪನ್ಮೂಲ ಇಲಾಖೆ ಹಂಚಿಕೆ ಮಾಡಲಾಗಿದೆ.

ಈ ಸಚಿವ ಸಂಪುಟದಲ್ಲಿ ಹಿರಿಯ ನಾಯಕರು ಹಾಗೂ ಮೊದಲ ಬಾರಿಗೆ ಶಾಸಕರಾದವರಿಗೂ ಅವಕಾಶ ನೀಡಲಾಗಿದೆ. ಚುನಾವಣೆಯಲ್ಲಿ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಮೈತ್ರಿಕೂಟದ ಬೆಂಬಲದೊಂದಿಗೆ ಸರ್ಕಾರ ರಚಿಸಲಾಗಿತ್ತು.

ರಾಜಕೀಯ ವಿಶ್ಲೇಷಕರ ಪ್ರಕಾರ, ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ವಿಜಯ್ ಈಗ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ವಿಶೇಷವಾಗಿ ಯುವಜನತೆ, ಮಹಿಳಾ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಹೊಸ ಸರ್ಕಾರದ ಆದ್ಯತೆಗಳನ್ನು ತೋರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.