Home Advertisement
Home ಸುದ್ದಿ ದೇಶ ನಾಸಿಕ್‌ನಲ್ಲಿ ಭೀಕರ ಅಪಘಾತ! ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 9 ಮಂದಿ ದುರ್ಮರಣ

ನಾಸಿಕ್‌ನಲ್ಲಿ ಭೀಕರ ಅಪಘಾತ! ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 9 ಮಂದಿ ದುರ್ಮರಣ

0
134

ಇದು ಹೃದಯವಿದ್ರಾವಕ ಘಟನೆ ಒಂದೇ ಕುಟುಂಬದ ಕನಸುಗಳು ಕ್ಷಣಾರ್ಧದಲ್ಲಿ ಭಸ್ಮವಾಗಿವೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲೊಂದು ಭೀಕರ ಅಪಘಾತ ಸಂಭವಿಸಿ, ಮಕ್ಕಳು ಸೇರಿದಂತೆ 9 ಮಂದಿ ಜೀವ ಕಳೆದುಕೊಂಡಿದ್ದಾರೆ.

ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದಲ್ಲಿರುವ ರಾಜ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶುಕ್ರವಾರ ಸಂಜೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕಾರ್ಯಕ್ರಮ ಮುಗಿದ ನಂತರ, ದರ್ಗುಡೆ ಕುಟುಂಬವು ಮಾರುತಿ XL6 ಕಾರಿನಲ್ಲಿ ಮನೆಗೆ ಮರಳುತ್ತಿತ್ತು.

ಮನೆಗೆ ತೆರಳುವಾಗ ಕಾರು ನಿಯಂತ್ರಣ ಕಳೆದುಕೊಂಡು ಬಾವಿಗೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಯಲ್ಲಿ ಮೃತಪಟ್ಟವರನ್ನು ರೇಷ್ಮಾ ಸುನಿಲ್ ದರ್ಗುಡೆ (27), ಆಶಾ ಅನಿಲ್ ದರ್ಗುಡೆ (32), ಖುಷಿ/ಶ್ರಿಷ್ಟಿ ಅನಿಲ್ ದರ್ಗುಡೆ (14), ಶ್ರೇಯಸ್ ಅನಿಲ್ ದರ್ಗುಡೆ (11), ರಾಖಿ/ಗುಣವಂತಿ ಸುನಿಲ್ ದರ್ಗುಡೆ, ಶ್ರಾವಣಿ ಅನಿಲ್ ದರ್ಗುಡೆ (11), ಸಮೃದ್ಧಿ ರಾಜೇಂದ್ರ ದರ್ಗುಡೆ (7), ಮಾಧುರಿ ಅನಿಲ್ ದರ್ಗುಡೆ (13) ಮತ್ತು ಸುನಿಲ್ ದತ್ತು ದರ್ಗುಡೆ (32) ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ದಿಂಡೋರಿ ತಾಲೂಕಿನ ಇಂದೋರ್ ನಿವಾಸಿಗಳಾಗಿದ್ದಾರೆ.

ಅಪಘಾತದ ನಂತರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ತಕ್ಷಣ ಆರಂಭಗೊಂಡಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡವೂ ಸ್ಥಳಕ್ಕೆ ಆಗಮಿಸಿದೆ. ಆದರೆ, ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ದಿಂಡೋರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಈ ಭೀಕರ ದುರಂತವು ಕುಟುಂಬವೊಂದನ್ನು ಸಂಪೂರ್ಣವಾಗಿ ನಾಶಮಾಡಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.