ವಾಹನವು ಈ ರಸ್ತೆ ಮೇಲೆ ಚಲಿಸಿದರೆ ‘ಜೈ ಹೋ’ ಹಾಡಿನ ರಾಗ ಕೇಳಿಸುತ್ತದೆ
ಮುಂಬೈ: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ಮ್ಯೂಸಿಕಲ್ ರೋಡ್’ ಅನ್ನು ಮುಂಬೈ ಕರಾವಳಿ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ವಿಶೇಷ ರಸ್ತೆಯನ್ನು ಬುಧವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವಿಶಿಷ್ಟ ರಸ್ತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವತಿಯಿಂದ ನಿರ್ಮಾಣಗೊಂಡಿದ್ದು, ನಾರಿಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಹೋಗುವ ಲೇನ್‌ನಲ್ಲಿ, ವರ್ಲಿ ಸುರಂಗದಿಂದ ಹೊರಬಂದ ಬಳಿಕ ಸುಮಾರು 500 ಮೀಟರ್ ದೂರದಲ್ಲಿ ಸ್ಥಾಪಿಸಲಾಗಿದೆ. ಈ ರಸ್ತೆಗೆ ಛತ್ರಪತಿ ಸಂಭಾಜಿ ಮಹಾರಾಜ್ ಹೆಸರನ್ನು ಇಡಲಾಗಿದೆ.
ಇದನ್ನೂ ಓದಿ: ಧಾರವಾಡ: ನೌಕರರ ಸಂಘದ ಜಿಲ್ಲಾಧ್ಯಕ್ಷರ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಈ ಮ್ಯೂಸಿಕಲ್ ರೋಡ್‌ನಲ್ಲಿ ವಾಹನಗಳು ನಿಗದಿತ ವೇಗದಲ್ಲಿ ಸಂಚರಿಸಿದರೆ, ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆಯಿಂದ ಶಬ್ದ ತರಂಗಗಳು ಉಂಟಾಗಿ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ‘ಜೈ ಹೋ’ ಹಾಡಿನ ರಾಗ ಕೇಳಿಸಿಕೊಳ್ಳುತ್ತದೆ. ವಾಹನಗಳು ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಿಸಿದಾಗ ಮಾತ್ರ ಈ ಸಂಗೀತ ಸ್ಪಷ್ಟವಾಗಿ ಕೇಳಿಸಲಿದೆ ಎಂದು ಬಿಎಂಸಿ ತಿಳಿಸಿದೆ.
ಚಾಲಕರಿಗೆ ಮುಂಚಿತವಾಗಿ ಮಾಹಿತಿ ನೀಡಲು ರಸ್ತೆ ಬಳಿ 500 ಮೀಟರ್, 100 ಮೀಟರ್ ಹಾಗೂ 60 ಮೀಟರ್ ದೂರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ ಚಾಲಕರು ನಿಗದಿತ ವೇಗವನ್ನು ಕಾಪಾಡಿಕೊಂಡು ಈ ಸಂಗೀತ ಅನುಭವವನ್ನು ಆನಂದಿಸಬಹುದು.
ಇದನ್ನೂ ಓದಿ: ದಾವಣಗೆರೆ: ಬೆಸ್ಕಾಂ ಇಂಜಿನಿಯರ್ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಈ ಮ್ಯೂಸಿಕಲ್ ರೋಡ್ ಕಲ್ಪನೆಯನ್ನು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದು, 2007ರಲ್ಲಿ ಜಪಾನ್‌ನಲ್ಲಿ ಮೊದಲ ಬಾರಿಗೆ ಇಂತಹ ರಸ್ತೆ ಪರಿಚಯಿಸಲಾಯಿತು. ನಂತರ ಹಂಗೇರಿ, ದಕ್ಷಿಣ ಕೊರಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಈ ರೀತಿಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದೀಗ ಮುಂಬೈನಲ್ಲಿ ನಿರ್ಮಿಸಿರುವ ಈ ರಸ್ತೆ ವಿಶ್ವದಲ್ಲಿ ಐದನೇ ಹಾಗೂ ಭಾರತದಲ್ಲಿ ಮೊದಲನೆಯ ಮ್ಯೂಸಿಕಲ್ ರೋಡ್ ಆಗಿದೆ ಎಂದು ಬಿಎಂಸಿ ಹೇಳಿದೆ.
ಈ ವಿಶೇಷ ರಸ್ತೆ ಪ್ರವಾಸಿಗರು ಹಾಗೂ ವಾಹನ ಚಾಲಕರಿಗೆ ಹೊಸ ಅನುಭವ ನೀಡಲಿದ್ದು, ಮುಂಬೈ ನಗರದ ಮತ್ತೊಂದು ಆಕರ್ಷಣೆಯಾಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ.





















