Home Advertisement
Home ಸುದ್ದಿ ದೇಶ 2029ಕ್ಕೆ ದೇಶದಲ್ಲಿ ದೊಡ್ಡ ಬದಲಾವಣೆ: 543ರಿಂದ 850ಕ್ಕೆ ಲೋಕಸಭಾ ಕ್ಷೇತ್ರಗಳ ವಿಸ್ತರಣೆ?

2029ಕ್ಕೆ ದೇಶದಲ್ಲಿ ದೊಡ್ಡ ಬದಲಾವಣೆ: 543ರಿಂದ 850ಕ್ಕೆ ಲೋಕಸಭಾ ಕ್ಷೇತ್ರಗಳ ವಿಸ್ತರಣೆ?

0
80

ನವದೆಹಲಿ: ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದಾದ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ 850ಕ್ಕೆ ಹೆಚ್ಚಿಸುವ ಕುರಿತು ಸಂವಿಧಾನದ 131ನೇ ತಿದ್ದುಪಡಿ ವಿಧೇಯಕದ ಕರಡನ್ನು ಸರ್ಕಾರವು ಸಂಸದರೊಂದಿಗೆ ಹಂಚಿಕೊಂಡಿದೆ.

ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ. ಈ ಪ್ರಸ್ತಾವನೆ ಜಾರಿಯಾದರೆ ದೇಶದ ಚುನಾವಣಾ ರಾಜಕೀಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ.

ಸ್ಥಾನಗಳ ಹೆಚ್ಚಳ – ಏನು ಯೋಜನೆ? : ಈ ಹೊಸ ಪ್ರಸ್ತಾವನೆಯ ಪ್ರಕಾರ, ಒಟ್ಟು 850 ಲೋಕಸಭಾ ಸ್ಥಾನಗಳಲ್ಲಿ 815 ಸ್ಥಾನಗಳನ್ನು ರಾಜ್ಯಗಳಿಗೆ ಮತ್ತು 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡುವ ಯೋಜನೆ ಇದೆ. ಪ್ರಸ್ತುತ ವ್ಯವಸ್ಥೆಯೊಂದಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ವಿಸ್ತರಣೆ ಆಗಲಿದೆ.

ಮಹಿಳಾ ಮೀಸಲಾತಿಗೆ ವೇಗ : ಈ ಸೀಟುಗಳ ಹೆಚ್ಚಳದ ಮೂಲಕ 33% ಮಹಿಳಾ ಮೀಸಲಾತಿಯನ್ನು 2029ರ ಲೋಕಸಭಾ ಚುನಾವಣೆಯ ವೇಳೆಗೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. “ನಾರಿ ಶಕ್ತಿ ವಂದನ್ ಅಧಿನಿಯಮ” ಅನುಷ್ಠಾನಕ್ಕೆ ಇದು ಪ್ರಮುಖ ಹೆಜ್ಜೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ರಾಜ್ಯಗಳ ಆತಂಕ : ಈ ಪ್ರಸ್ತಾವನೆಗೆ ವಿರೋಧ ಪಕ್ಷಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕ್ಷೇತ್ರ ಪುನರ್ವಿಂಗಡಣೆಯಿಂದ ತಮ್ಮ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ವಿಷಯದಲ್ಲಿ ಈಗಾಗಲೇ ಕಠಿಣ ಎಚ್ಚರಿಕೆ ನೀಡಿದ್ದು, ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟಾದರೆ ಭಾರಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ: ಕೇಂದ್ರಕ್ಕೆ ಸ್ಟಾಲಿನ್ ಅಂತಿಮ ಎಚ್ಚರಿಕೆ!

ಹೊಸ ರಾಜಕೀಯ ಸಮೀಕರಣ: ಈ ತಿದ್ದುಪಡಿ ಅಂಗೀಕಾರವಾದಲ್ಲಿ 2029ರ ಲೋಕಸಭೆ ಚುನಾವಣೆಗಳು ಹೊಸದಾಗಿ ರೂಪುಗೊಳ್ಳುವ 850 ಕ್ಷೇತ್ರಗಳಲ್ಲಿ ನಡೆಯಲಿವೆ. ಇದರಿಂದ ದೇಶದ ರಾಜಕೀಯ ಸಮೀಕರಣವೇ ಬದಲಾಗುವ ಸಾಧ್ಯತೆ ಇದೆ.