Home Advertisement
Home ಸುದ್ದಿ ದೇಶ “ಪಕ್ಷದ ಭವಿಷ್ಯ ಇದೇನಾ?”: AIADMK ಹಿರಿಯ ನಾಯಕನ ರಾಜೀನಾಮೆ

“ಪಕ್ಷದ ಭವಿಷ್ಯ ಇದೇನಾ?”: AIADMK ಹಿರಿಯ ನಾಯಕನ ರಾಜೀನಾಮೆ

0
70

ಕರ್ಪೂರ ಕರಗಬಹುದು, ಆದರೆ ಪಕ್ಷವೇ ಕರಗಬೇಕೇ?, “ಪಕ್ಷದ ಭವಿಷ್ಯ ಇದೇನಾ?”: ನೋವಿನ ಮಧ್ಯೆ ಎಐಎಡಿಎಂಕೆ ತೊರೆದ ಸೆಮ್ಮಲೈ

ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)ಗೆ ಮತ್ತೊಂದು ದೊಡ್ಡ ರಾಜಕೀಯ ಆಘಾತ ಎದುರಾಗಿದ್ದು, ಹಿರಿಯ ನಾಯಕ ಎಸ್. ಸೆಮ್ಮಲೈ ಸೋಮವಾರ ಪಕ್ಷದ ಎಲ್ಲಾ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿಗೆ ಅವರಿಗೆ ಬರೆದ ಭಾವುಕ ರಾಜೀನಾಮೆ ಪತ್ರದಲ್ಲಿ, ಚುನಾವಣೆಯ ನಂತರ ಪಕ್ಷದಲ್ಲಿ ನಡೆದಿರುವ ಬೆಳವಣಿಗೆಗಳು ತಮಗೆ “ಅಪಾರ ಮಾನಸಿಕ ಯಾತನೆ” ಉಂಟುಮಾಡಿವೆ ಎಂದು ಸೆಮ್ಮಲೈ ತಿಳಿಸಿದ್ದಾರೆ.

“ಪಕ್ಷದ ಭವಿಷ್ಯ ಇದೇನಾ?” ಎಂದು ಪ್ರಶ್ನೆ : ತಮ್ಮ ಪತ್ರದಲ್ಲಿ ಸೆಮ್ಮಲೈ, ಎಐಎಡಿಎಂಕೆ ಸ್ಥಾಪಕರಾದ ಎಂ. ಜಿ. ರಾಮಚಂದ್ರನ್ ಮತ್ತು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಪರಂಪರೆಯನ್ನು ಉಲ್ಲೇಖಿಸಿ ಭಾವುಕವಾಗಿ ಪ್ರಶ್ನೆ ಎತ್ತಿದ್ದಾರೆ.

“ಸುವರ್ಣ ಹೃದಯದ ಕ್ರಾಂತಿಕಾರಿ ನಾಯಕ ಎಂಜಿಆರ್ ನಿರ್ಮಿಸಿದ ಹಾಗೂ ಅಮ್ಮ ಜಯಲಲಿತಾ ರಕ್ಷಿಸಿದ ಚಳುವಳಿಯ ಭವಿಷ್ಯ ಇದೇನಾ? ಕರ್ಪೂರ ಕರಗಬಹುದು, ಆದರೆ ಪಕ್ಷವೇ ಕರಗಬೇಕೇ? ಇದು ನಿಜವಾಗಿಯೂ ಹೃದಯ ನೋಯಿಸುತ್ತದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಂತರಿಕ ಸಂಘರ್ಷಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ : ಇತ್ತೀಚಿನ ದಿನಗಳಲ್ಲಿ ಎಐಎಡಿಎಂಕೆಯೊಳಗಿನ ಭಿನ್ನಮತ, ಗುಂಪುಗಾರಿಕೆ ಮತ್ತು ನಾಯಕತ್ವದ ವಿಚಾರದಲ್ಲಿ ನಡೆಯುತ್ತಿರುವ ಸಂಘರ್ಷಗಳು ಪಕ್ಷದ ಗೌರವಕ್ಕೆ ಧಕ್ಕೆ ತಂದಿವೆ ಎಂದು ಸೆಮ್ಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾದ್ಯಮಗಳಲ್ಲಿಯೂ ಪಕ್ಷದ ಒಳಜಗಳ ಕುರಿತು ಟೀಕೆಗಳು ಪ್ರಕಟವಾಗುತ್ತಿದ್ದು, “ಎಐಎಡಿಎಂಕೆ ತನ್ನ ಆಂತರಿಕ ಸಂಘರ್ಷಗಳಿಂದಲೇ ಅವಮಾನಕ್ಕೊಳಗಾಗಿದೆ” ಎಂಬ ರೀತಿಯ ಅಭಿಪ್ರಾಯಗಳು ಹೊರಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

“ಅವಕಾಶಗಳು ನಿರಾಕರಿಸಲ್ಪಟ್ಟರೂ ಪಕ್ಷ ಬಿಟ್ಟಿರಲಿಲ್ಲ”: ತಮ್ಮ ದೀರ್ಘ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಸೆಮ್ಮಲೈ, ಎಂಜಿಆರ್ ಮತ್ತು ಜಯಲಲಿತಾ ಇಬ್ಬರೂ ತಮಗೆ ರಾಜಕೀಯದಲ್ಲಿ ಅನೇಕ ಅವಕಾಶಗಳನ್ನು ನೀಡಿದ್ದರು ಎಂದು ಹೇಳಿದ್ದಾರೆ. ಜಯಲಲಿತಾ ನಿಧನದ ಬಳಿಕ ತಮಗೆ ಹಲವು ಅವಕಾಶಗಳು ನಿರಾಕರಿಸಲ್ಪಟ್ಟಿದ್ದರೂ, ಯಾವುದೇ ಅಸಮಾಧಾನ ವ್ಯಕ್ತಪಡಿಸದೆ ಪಕ್ಷದ ಶಿಸ್ತು ಪಾಲಿಸಿ ಕೆಲಸ ಮಾಡುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.

“ಅಮ್ಮ ನಿಧನದ ನಂತರ ನನಗೆ ಅನೇಕ ಅವಕಾಶಗಳನ್ನು ನಿರಾಕರಿಸಲಾಯಿತು. ಆದರೂ ನಾನು ಯಾವುದೇ ಬೇಸರ ವ್ಯಕ್ತಪಡಿಸಲಿಲ್ಲ. ಪಕ್ಷದ ನಾಯಕತ್ವದ ಅಡಿಯಲ್ಲಿ ಶಿಸ್ತಿನಿಂದ ಕೆಲಸ ಮಾಡುತ್ತಲೇ ಇದ್ದೆ” ಎಂದು ಅವರು ಬರೆದಿದ್ದಾರೆ.

“ಭಾರವಾದ ಹೃದಯದಿಂದ ರಾಜೀನಾಮೆ” : ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷದೊಳಗೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿರುವ ಸೆಮ್ಮಲೈ, “ಭಾರವಾದ ಹೃದಯದಿಂದ” ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. “ನಾನು ತೆಗೆದುಕೊಂಡಿರುವ ಈ ನಿರ್ಧಾರಕ್ಕಾಗಿ ಆ ಮಹಾನ್ ನಾಯಕರ ಆತ್ಮಗಳಿಂದ ಕ್ಷಮೆಯಾಚಿಸುತ್ತೇನೆ. ನಾನು ಹೊಂದಿರುವ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಮತ್ತು ಪಕ್ಷಕ್ಕೂ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಪತ್ರದ ಅಂತ್ಯದಲ್ಲಿ ಉಲ್ಲೇಖಿಸಿದ್ದಾರೆ.

ಎಐಎಡಿಎಂಕೆಯೊಳಗಿನ ಆಂತರಿಕ ಅಸಮಾಧಾನ ಹಾಗೂ ನಾಯಕತ್ವದ ಸವಾಲುಗಳ ನಡುವೆ ಹಿರಿಯ ನಾಯಕರ ರಾಜೀನಾಮೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬೆಳವಣಿಗೆಗಳು ಇನ್ನಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.