SK Home Ad
Home ಸಿನಿ ಮಿಲ್ಸ್ ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಹೋರಾಟಕ್ಕೆ ಫುಲ್‌ಸ್ಟಾಪ್‌

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಹೋರಾಟಕ್ಕೆ ಫುಲ್‌ಸ್ಟಾಪ್‌

0
3

ಬೆಂಗಳೂರು: ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದ ಹೇಳಿಕೆ ಕುರಿತು ಗಾಯಕ ಸೋನು ನಿಗಮ್ ಅವರು ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸುತ್ತಿದ್ದ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಾಗಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಾರಾಯಣಗೌಡ, ಸೋನು ನಿಗಮ್ ಅವರು ಇಂದು ತಮ್ಮೊಂದಿಗೆ ಮಾತನಾಡಿದ್ದು, ಹಿಂದೆ ನೀಡಿದ್ದ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಸೋನು ನಿಗಮ್ ಅವರ ಬಗ್ಗೆ ಕನ್ನಡಿಗರಿಗೆ ವೈಯಕ್ತಿಕವಾಗಿ ಯಾವುದೇ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ ಅವರು ಆಡಿದ ಒಂದು ಮಾತನ್ನು ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕನ್ನಡಿಗರ ಪ್ರತಿಭಟನೆ ಮತ್ತು ಆಕ್ರೋಶ ಸಹಜವಾಗಿತ್ತು ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಇದೀಗ ಸೋನು ನಿಗಮ್ ಕ್ಷಮೆ ಕೇಳಿರುವುದರಿಂದ ವಿವಾದವನ್ನು ಇಲ್ಲಿಗೆ ಮುಗಿಸುವುದು ಸೂಕ್ತ. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ ಮತ್ತು ಸಂಸ್ಕಾರ ಎಂದು ಅವರು ಹೇಳಿದ್ದಾರೆ.

ಘಂಟಸಾಲ, ಪಿ.ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಮತ್ತು ಚಿತ್ರಾ ಅವರಂತಹ ಕನ್ನಡಿಗರಲ್ಲದ ಅನೇಕ ಮಹಾನ್ ಗಾಯಕರು ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರು ಅವರನ್ನು ಅಪಾರವಾಗಿ ಪ್ರೀತಿಸಿದ್ದಾರೆ. ಸೋನು ನಿಗಮ್ ಕೂಡ ಇದೇ ಸಾಲಿನಲ್ಲಿ ಬರುವ ಮಹಾನ್ ಗಾಯಕರಲ್ಲಿ ಒಬ್ಬರು. ಈ ಕಹಿ ಘಟನೆಯನ್ನು ಮರೆತುಬಿಡೋಣ ಎಂದು ನಾರಾಯಣಗೌಡ ಮನವಿ ಮಾಡಿದ್ದಾರೆ.

ತಾವು ವೈಯಕ್ತಿಕವಾಗಿ ಸಂಗೀತ ಪ್ರೇಮಿಯಾಗಿದ್ದು, ಸಂಗೀತ ಮನುಷ್ಯನ ಸಂಕಟಗಳನ್ನು ಮರೆಸುವ ಸಂಜೀವಿನಿ ಎಂದು ಬಣ್ಣಿಸಿರುವ ಅವರು, ಸೋನು ನಿಗಮ್ ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ, ಕರ್ನಾಟಕದ ನೆಲದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದ್ದಾರೆ. ಸಂಗೀತದ ಮೂಲಕ ಪ್ರೀತಿ ಗೆಲ್ಲಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.