ಉತ್ತರ ಕರ್ನಾಟಕ ಸೊಗಡಿನ ಹೊಸ ಸಿನಿಮಾ: 26ರಿಂದ ಶೂಟಿಂಗ್ ಆರಂಭ
ಕನ್ನಡ ಚಿತ್ರರಂಗಕ್ಕೆ ‘ಬೆಲ್ ಬಾಟಮ್’ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರು ಏಳು ವರ್ಷಗಳ ವಿರಾಮದ ಬಳಿಕ ತಮ್ಮದೇ ಗೋಲ್ಡನ್ ಹಾರ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಹೊಸ ಚಿತ್ರದ ಹೆಸರು ‘ಹುಬ್ಬಳ್ಳಿ ಹಂಟರ್ಸ್’.
ಉತ್ತರ ಕರ್ನಾಟಕದ ಸೊಗಡು, ಭಾಷೆ ಮತ್ತು ನೆಲದ ಕಥಾಹಂದರವನ್ನು ಒಳಗೊಂಡಿರುವ ಹುಬ್ಬಳ್ಳಿ ಹಂಟರ್ಸ್ ಚಿತ್ರವು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ಹೊಂದಿದೆ. ವಿಶೇಷವಾಗಿ, ಈ ಚಿತ್ರದಲ್ಲಿ ಖ್ಯಾತ ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಪ್ರತಿಭಾನ್ವಿತ ಕಲಾವಿದರು ಅಭಿನಯಿಸುತ್ತಿರುವುದು ಚಿತ್ರದ ಮತ್ತೊಂದು ಆಕರ್ಷಣೆ.
ಇದನ್ನೂ ಓದಿ: ಹುಬ್ಬಳ್ಳಿ: ನವನಗರದಲ್ಲಿ ಚಿರತೆ ಪ್ರತ್ಯಕ್ಷ – ವೈರಲ್ ಆದ ವಿಡಿಯೋ
ಈ ಹಿಂದೆ ‘ಎಡಗೈ ಅಪಘಾತಕ್ಕೆ ಕಾರಣ’ ಎಂಬ ಗಮನ ಸೆಳೆದ ಸಿನಿಮಾವನ್ನು ನಿರ್ದೇಶಿಸಿದ್ದ ಸಮರ್ಥ್ ಬಿ. ಕಡಕೋಳ್ ಅವರು ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬದುಕು, ಹಾಸ್ಯ, ಭಾವನೆ ಮತ್ತು ನೆಲದ ನೈಜತೆಯನ್ನು ಸಿನಿಮಾ ಮೂಲಕ ಹೇಳಲು ಸಮರ್ಥ್ ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪ್ರಮೋದ್ ಶೆಟ್ಟಿ ಅವರು ಹುಬ್ಬಳ್ಳಿ ಹಂಟರ್ಸ್ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ‘ಮಹಾನಟಿ’ ಖ್ಯಾತಿಯ ನಟಿ ಧನ್ಯಶ್ರೀ ಸುಜಿತ್ ಅವರು ಪ್ರಮುಖ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್
ಚಿತ್ರದ ಸಂಭಾಷಣೆ ವಿಭಾಗದಲ್ಲಿ ನಿರ್ದೇಶಕ ಸಮರ್ಥ್ ಬಿ. ಕಡಕೋಳ್ ಜೊತೆಗೆ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಹುಬ್ಬಳ್ಳಿ ಹಂಟರ್ಸ್ ಚಿತ್ರದ ಶೂಟಿಂಗ್ ಇದೇ ತಿಂಗಳ 26ರಿಂದ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ: 🎼 ಸ್ಯಾಂಡಲ್‌ವುಡ್‌ನ ಹಿಟ್ ಮೆಲೋಡಿ ಹಾಡುಗಳ ಪಟ್ಟಿಗೆ ಸೇರಲಿರುವ ಮುದ್ದು ಗುಮ್ಮ
ಈ ಕುರಿತು ನಿರ್ದೇಶಕ ಸಮರ್ಥ್ ಬಿ. ಕಡಕೋಳ್ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಚಿತ್ರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದ ನೆಲದ ಸೊಗಡನ್ನು ಸಿನಿಮಾ ಪರದೆಯ ಮೇಲೆ ಜೀವಂತವಾಗಿ ಮೂಡಿಸುವ ನಿರೀಕ್ಷೆಯಲ್ಲಿ ಚಿತ್ರಪ್ರೇಕ್ಷಕರು ಕಾದು ಕುಳಿತಿದ್ದಾರೆ.























