ಬಿಗ್ ಬಾಸ್ ಕನ್ನಡದ ವಾರಾಂತ್ಯದ ಪಂಚಾಯಿತಿಯಲ್ಲಿ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಮತ್ತೊಂದು ಅನಿರೀಕ್ಷಿತ ಶಾಕ್ ನೀಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ‘ಕನ್ನಡಿ ಪ್ರತಿಬಿಂಬ’ ಟಾಸ್ಕ್ ಮೂಲಕ ಮನೆಯಲ್ಲಿದ್ದವರ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.
ವಿಶೇಷ ಎಲಿಮಿನೇಷನ್ ಪರೀಕ್ಷೆಯಲ್ಲಿ ಅವಿನಾಶ್ ಹಾಗೂ ವೈಷ್ಣವಿ ಅವರ ಕನ್ನಡಿ ಗಾಜು ಒಡೆಯದೆ ಉಳಿದುಕೊಂಡಿದ್ದು, ಅವರಿಬ್ಬರೂ ಸುರಕ್ಷಿತವಾಗಿ ಮನೆ ಪ್ರವೇಶಿಸಿದರು. ಆದ್ರೆ ಮಾಡರ್ನ್ ಮಹಾಕವಿ ಮಂಜು ಹಾಗೂ ಕಿರಣ್ ಶಾಸ್ತ್ರಿ ಅವರ ಕನ್ನಡಿ ಗಾಜು ಒಡೆದು ಪುಡಿಯಾಗುತ್ತಿದ್ದಂತೆ ಇಡೀ ಮನೆಯಲ್ಲಿದ್ದ ಸ್ಪರ್ಧಿಗಳು ಆಘಾತಕ್ಕೆ ಒಳಗಾದರು.
ಎಲ್ಲರೂ ಆತಂಕದಲ್ಲಿದ್ದ ಕ್ಷಣದಲ್ಲೇ ತೆರೆಮೇಲೆ ಬಂದ ಕಿಚ್ಚ ಸುದೀಪ್ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿದರು. ಈ ವಾರ ಬಿಗ್ ಬಾಸ್ ಮನೆಯಿಂದ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂದು ಘೋಷಿಸಿ, ನಾಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ರಿಲೀಫ್ ನೀಡಿದರು.
ಇದೇ ವೇಳೆ ಮನೆಯಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುದೀಪ್, ಸ್ಪರ್ಧಿಗಳಿಗೆ ಖಡಕ್ ಕಿವಿಮಾತು ಹೇಳಿದರು. “ಸ್ಪರ್ಧಿಗಳು ತಮ್ಮ ಮನಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಮನೆಯಲ್ಲಿ ನಡೆದ ಕೆಲ ವಿಚಾರಗಳು ನನಗೆ ತೀವ್ರ ಬೇಸರ ತರಿಸಿವೆ. ನಿಮ್ಮ ಮೇಲಿನ ಪ್ರೀತಿಯಿಂದಲೇ ಹೇಳುತ್ತಿದ್ದೇನೆ, ತಿದ್ದಿ ಬುದ್ಧಿ ಹೇಳುವುದು ನಮ್ಮ ಕೆಲಸ, ಅದನ್ನು ಅರಿತು ತಿದ್ದಿಕೊಳ್ಳುವುದು ನಿಮ್ಮ ಜವಾಬ್ದಾರಿ” ಎಂದು ಎಚ್ಚರಿಸಿದರು.
ಎಲಿಮಿನೇಷನ್ ರದ್ದಾಗಿದ್ದರೂ ಮಂಜು ಮತ್ತು ಕಿರಣ್ ಗಾಜು ಒಡೆದಿರುವುದರಿಂದ, ಅವರನ್ನು ಸೀಕ್ರೇಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಹಿಂದೆ ಜಗಳದ ಕಾರಣಕ್ಕೆ ಧ್ರುವಂತ್ ಮತ್ತು ರಕ್ಷಿತಾ ಅವರನ್ನು ಸೀಕ್ರೇಟ್ ರೂಮ್‌ಗೆ ಹಾಕಲಾಗಿತ್ತು. ಅದೇ ಮಾದರಿಯಲ್ಲಿ ಇವರನ್ನೂ ಅಲ್ಲಿ ಇರಿಸಿರಬಹುದು ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.






















