ಕನ್ನಡ ಚಿತ್ರರಂಗದಲ್ಲಿ ಈಗ ‘ಟೈಗರ್’ ವಿನೋದ್ ಪ್ರಭಾಕರ್ ಅವರದ್ದೇ ಹವಾ. ಈಗಾಗಲೇ ಎರಡು ಸೂಪರ್ ಹಿಟ್ ಹಾಡುಗಳ ಮೂಲಕ ಭಾರಿ ಸದ್ದು ಮಾಡಿದ್ದ ‘ಬಲರಾಮನ ದಿನಗಳು’ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ‘ಮಾದೇವ’ ಚಿತ್ರದ ದೊಡ್ಡ ಯಶಸ್ಸಿನ ನಂತರ ವಿನೋದ್ ಪ್ರಭಾಕರ್ ತಮ್ಮ ಮಾಸ್ ಇಮೇಜ್ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಟೀಸರ್‌ನಲ್ಲಿ ಅವರ ರಗಡ್ ಲುಕ್ ಮತ್ತು ಎನರ್ಜಿಟಿಕ್ ಡಾನ್ಸ್ ಕಂಡ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
ಈ ಅದ್ಧೂರಿ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕಿ ಪದ್ಮಾವತಿ ಅವರು ವೇದಿಕೆಯೇರಿ ಚಿತ್ರದ ಜರ್ನಿಯನ್ನು ಹಂಚಿಕೊಂಡರು. ವಿಶೇಷವೆಂದರೆ, ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದು ಮಾತ್ರವಲ್ಲದೆ, ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಮಕ್ಕಳು ಮತ್ತು ಸೊಸೆಯ ಸಹಕಾರವನ್ನು ನೆನೆದು ಭಾವುಕರಾದ ಅವರು, ನಿರ್ದೇಶಕ ಕೆ.ಎಂ. ಚೈತನ್ಯ ಮತ್ತು ವಿನೋದ್ ಪ್ರಭಾಕರ್ ಈ ಸಿನಿಮಾದ ದೊಡ್ಡ ಶಕ್ತಿ ಎಂದು ಹೆಮ್ಮೆಯಿಂದ ಹೇಳಿದರು.

ಇನ್ನು ವೇದಿಕೆಯಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, ನಿರ್ಮಾಪಕರ ಪುತ್ರನಿಗೆ ಜೀವನದ ಪಾಠವೊಂದನ್ನು ತಿಳಿಸಿದರು. “ಸಿನಿಮಾ ಎಂಬುದು ಸಾಗರವಿದ್ದಂತೆ. ನೂರಾರು ಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ ನನ್ನ ತಂದೆ ಪ್ರಭಾಕರ್ ಅವರೇ ‘ನನಗಿನ್ನೂ ಸಿನಿಮಾ ಪೂರ್ತಿ ಅರ್ಥವಾಗಿಲ್ಲ’ ಎನ್ನುತ್ತಿದ್ದರು. ಹಾಗಾಗಿ ನಾವೆಲ್ಲರೂ ಇಲ್ಲಿ ನಿರಂತರ ವಿದ್ಯಾರ್ಥಿಗಳು” ಎಂದು ಕಿವಿಮಾತು ಹೇಳಿದರು. ಅಲ್ಲದೆ, ಈ ಸಿನಿಮಾ ‘ಮಾದೇವ’ ಚಿತ್ರಕ್ಕಿಂತ ಎರಡು ಪಟ್ಟು ಹೆಚ್ಚು ಯಶಸ್ಸು ಕಾಣುವ ಭರವಸೆಯನ್ನು ವ್ಯಕ್ತಪಡಿಸಿದರು.
ನಿರ್ದೇಶಕ ಕೆ.ಎಂ. ಚೈತನ್ಯ ಅವರು ತಮ್ಮ ಇಡೀ ಸಹಾಯಕ ನಿರ್ದೇಶಕರ ತಂಡವನ್ನು ವೇದಿಕೆಗೆ ಕರೆತಂದು ಪರಿಚಯಿಸುವ ಮೂಲಕ ಮಾದರಿಯಾದರು. 80ರ ದಶಕದ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೂ ಮತ್ತು ಚೈತನ್ಯ ಅವರ ಹಿಂದಿನ ಸೂಪರ್ ಹಿಟ್ ಸಿನಿಮಾ ‘ಆ ದಿನಗಳು’ ಚಿತ್ರಕ್ಕೂ ಏನೋ ಒಂದು ನಂಟಿರುವ ಸುಳಿವು ಟೀಸರ್‌ನಲ್ಲಿ ಗೋಚರಿಸುತ್ತಿದೆ.
ಇದನ್ನು ಓದಿ: http://ಅಣ್ಣಾವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಚೇತನ್; ಸಮಾಧಿಗೆ ಅಷ್ಟೊಂದು ಜಾಗ ಯಾಕೆ? ಸರ್ಕಾರದ ವಿರುದ್ಧ ಸಿಡಿದ ನಟ!
ಚಿತ್ರದ ತಾರಾಬಳಗವೂ ಅಷ್ಟೇ ಅದ್ಧೂರಿಯಾಗಿದೆ. ನಟ ರಮೇಶ್ ಇಂದಿರಾ ಅವರು ‘ಮೋನಪ್ಪ ರೈ’ ಎಂಬ ಪಾತ್ರದಲ್ಲಿ ತುಳು ಭಾಷೆ ಮಾತನಾಡಿ ಗಮನ ಸೆಳೆದರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ‘ಕತ್ತಿ’ ಎಂಬ ರೌಡಿಯ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ರಜತ್, ಸಾಹಸ ನಟ ಡ್ರ್ಯಾಗನ್ ಮಂಜು, ಪೋಲಿಸ್ ಅಧಿಕಾರಿಗಳಾಗಿ ಮಿಂಚಿರುವ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದು, ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಮತ್ತು ಶರತ್ ಲೋಹಿತಾಶ್ವ ಅಂತಹ ದಿಗ್ಗಜ ಕಲಾವಿದರ ದಂಡೇ ಇಲ್ಲಿದೆ. ಒಟ್ಟಾರೆಯಾಗಿ, ‘ಬಲರಾಮನ ದಿನಗಳು’ ಟೀಸರ್ ನೋಡುತ್ತಿದ್ದರೆ ಕನ್ನಡಕ್ಕೆ ಮತ್ತೊಂದು ಅದ್ಧೂರಿ ಕ್ರೈಮ್ ಡ್ರಾಮಾ ಸಿನಿಮಾ ಸಿಗುವುದು ಗ್ಯಾರಂಟಿ ಎನಿಸುತ್ತಿದೆ.























