ಶಿವಮೊಗ್ಗ: ಭದ್ರಾವತಿಯಲ್ಲಿ ವೃದ್ಧ ದಂಪತಿ ನಿಗೂಢವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಎಂಬುದು ಬಹಿರಂಗವಾಗಿದ್ದು, ಆಯುರ್ವೇದಿಕ್ ವೈದ್ಯ ಮಲ್ಲೇಶ್ ಎಂಬುವರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಭದ್ರಾವತಿ ನಗರದ ಬೂತನಗುಡಿಯಲ್ಲಿ ವೃದ್ಧರಾದ ಜಯಮ್ಮ (75) ಮತ್ತು ಚಂದ್ರಣ್ಣನವರ (78) ಹತ್ಯೆ ಮಾಡಿರುವ ವಿಷಯ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಇದೀಗ ಬಂಧಿಸಲಾಗಿರುವ ವೈದ್ಯ ಮೃತ ಚಂದ್ರಣ್ಣನವರ ತಮ್ಮ ಪಾಲಾಕ್ಷಪ್ಪನ ಮಗನಾಗಿದ್ದಾನೆ ಎಂದರು.
ಇದನ್ನೂ ಓದಿ: ವೃದ್ಧ ದಂಪತಿ ಅನುಮಾನಸ್ಪದ ಸಾವು
ಮೈತುಂಬಾ ಸಾಲ ಮಾಡಿಕೊಂಡ ಮಲ್ಲೇಶ್, ದೊಡ್ಡಪ್ಪ ಚಂದ್ರಪ್ಪನವರ ಬಳಿ ಕೆಲ ದಿನಗಳ ಹಿಂದೆ 15 ಲಕ್ಷ ರೂ. ಕೇಳಿದ್ದನು. ಹಣ ನೀಡಲು ಅವರು ನಿರಾಕರಿಸಿದ ಮೇಲೆ ಸೇಡಿಗೆ ಬಿದ್ದಿದ್ದನು. ಮಂಗಳವಾರ ಚಂದ್ರಪ್ಪನವರ ಆರೋಗ್ಯ ವಿಚಾರದಲ್ಲಿ ವೆರಿಕೋಸ್‌ಗೆ ಚಿಕಿತ್ಸೆ ನೆಪದಲ್ಲಿ ಅನಸ್ತೇಷಿಯಾವನ್ನು ಹೆಚ್ಚಿಗೆ ನೀಡಿದ್ದಾನೆ. ಸಡನ್ ಆಗಿ ಬಿಪಿ ಡ್ರಾಪ್ ಆಗಿದೆ. ಇಬ್ಬರನ್ನೂ ಬೇರೆ ಬೇರೆ ಮಲಗಿಸಿ ಚಿನ್ನಾಭರಣ ಅಡವಿಟ್ಟಿದ್ದಾನೆ. 80 ಗ್ರಾಂ ಚಿನ್ನವನ್ನು ಸದ್ಯಕ್ಕೆ ವಶ ಪಡಿಸಿಕೊಳ್ಳಲಾಗಿದೆ. ಒಂದೇ ದಿನದಲ್ಲಿ ಸಾಲ ತೀರಿಸಿ ಅವನ ಅಕೌಂಟ್‌ನಲ್ಲಿ 50 ಸಾವಿರ ಉಳಿಸಿಕೊಂಡಿದ್ದಾನೆ. ಅಡುಗೆ ಮಾಡಿದ್ದರೂ ಊಟ ಮಾಡಿರಲಿಲ್ಲ. ಬಾಗಿಲು ಮುರಿದ ಸುಳಿವು ಸಹ ಇರಲಿಲ್ಲ. 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಎಸ್ಪಿ ನಿಖಿಲ್ ತಿಳಿಸಿದರು.
ಆರೋಪಿ 50 ಎಂ.ಜಿ ಅನಸ್ತೇಷಿಯಾ ಕೊಟ್ಟು ಸಾಯಿಸಿದ್ದು ಆತನಿಗೆ ಅನಸ್ತೇಷಿಯಾ ಎಲ್ಲಿ ಸಿಕ್ಕಿತು ಎಂಬುದರ ತನಿಖೆಯಾಗಬೇಕಿದೆ. ಮೃತಪಟ್ಟರಿಗೆ ಮೂವರು ಮಕ್ಕಳಿದ್ದರು, ಕೊನೆಯದಾಗಿ ಮಲ್ಲೇಶ್ ಮನೆಗೆ ಬಂದಿದ್ದರು. ಮರಣೋತ್ತರ ಪರೀಕ್ಷೆಗೂ ಮುನ್ನ ಪ್ರಕರಣ ದಾಖಲಿಸಲಾಗಿದೆ. ಡಾ. ಮಲ್ಲೇಶ್ ಮೊದಲು ಶಿವಮೊಗ್ಗದ ಎರಡು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು.






















