Home Advertisement
Home ನಮ್ಮ ಜಿಲ್ಲೆ ಮೈಸೂರು ಸಕಲ ದೋಷ ನಿವಾರಣೆಗೆ ಗಾಯತ್ರಿ ಮಂತ್ರವೇ ಪರಿಹಾರ

ಸಕಲ ದೋಷ ನಿವಾರಣೆಗೆ ಗಾಯತ್ರಿ ಮಂತ್ರವೇ ಪರಿಹಾರ

0
23

ಮೈಸೂರು: ಸಕಲ ದೋಷ ನಿವಾರಣೆಗೆ ಗಾಯತ್ರಿ ಮಂತ್ರವೇ ಪರಿಹಾರ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.

ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶಾಖೆ, ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿರುವ 10 ದಿನಗಳ ವೈವಿಧ್ಯಮಯ ಕಾರ್ಯಕ್ರಮ ಸರಣಿಗೆ ಗಾಯತ್ರಿ ಚಿಂತನ ವಿಶೇಷ ಪ್ರವಚನ ಮಾಡುವ ಮೂಲಕ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಪ ಮಾಡುವ ಮೊದಲು ದೈಹಿಕ ಮತ್ತು ಮಾನಸಿಕ ಶುದ್ಧಿಗಳು ಬಹು ಅಗತ್ಯ. ಅವುಗಳನ್ನು ಪಾಲಿಸಿದಾಗಲೇ ಮಂತ್ರ ಸಿದ್ದಿಯಾಗುತ್ತದೆ. ನಿತ್ಯವೂ ನಿರಂತರವಾಗಿ ಭಗವಂತನ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ದೇಹವನ್ನು, ಅಂಗಾಂಗಗಳನ್ನು ದೇವರು ಕೊಟ್ಟಿದ್ದಾನೆ. ಪ್ರತಿಯೊಬ್ಬರ ಮನವನ್ನು ಭಗವಂತ ನಿಯಂತ್ರಣ ಮಾಡುತ್ತಾನೆ. ಗಾಯತ್ರಿ ರೂಪದಲ್ಲಿ ಅವನನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪಂಡಿತ ಹೇಮಂತಾಚಾರ್ಯ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ಥಕ 8 ವರ್ಷಗಳನ್ನು ಪೂರ್ಣಗೊಳಿಸಿರುವ ಧ್ಯಾನ ಕೇಂದ್ರವು ನಿತ್ಯ ಒಂದಿಲ್ಲೊಂದು ಧಾರ್ಮಿಕ, ಅಧ್ಯಾತ್ಮಿಕ ಚಟುವಟಿಕೆಗಳಿಗೆ ವೇದಿಕೆಯಾಗಿದೆ ಎಂದರು.

ಜ್ಞಾನ ಸತ್ರಗಳ ಆಯೋಜನೆ, ಭಾರತೀಯ ಗೋ ತಳಿ ಸಂರಕ್ಷಣೆ, ಸಾಮಾಜಿಕ ಸೇವಾ ಕಾರ್ಯ, ಪಾದಯಾತ್ರೆ ಆಯೋಜನೆ ಮೂಲಕ ಧ್ಯಾನ ಕೇಂದ್ರವು ಭಕ್ತರ ಕ್ರಿಯಾಶೀಲತೆಗೆ ಪ್ರೇರಣೆ ನೀಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಯೋಜನೆ ಜಾರಿಗೊಳ್ಳಲಿದೆ. ಇವೆಲ್ಲಕ್ಕೂ ಭಕ್ತರ ಸಹಕಾರ ಪ್ರಧಾನವಾಗಿದೆ ಎಂದರು.

ಸನಾತನ ಸಂಸ್ಕೃತಿ, ಸಂಸ್ಕಾರ, ಮಾಧ್ವ ಪರಂಪರೆಯ ಸಂಪ್ರದಾಯಗಳ ಅನುಸರಣೆಗೆ ಧ್ಯಾನ ಕೇಂದ್ರ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ ಮಹತ್ತರವಾಗಿದೆ ಎಂದು ಅವರು ಧನ್ಯತೆಯಿಂದ ಸ್ಮರಿಸಿದರು.

ಏ. 25 ರವರೆಗೆ ನಿತ್ಯ ಸಂಜೆ 4 ರಿಂದ 7.30 ರವರೆಗೆ ಪಂಡಿತ ಬಾದರಾಯಣಾಚಾರ್ಯರಿಂದ ಗಾಯತ್ರಿ ಚಿಂತನ ವಿಶೇಷ ಪ್ರವಚನವಿದೆ. ಭಕ್ತರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು. ಹಿರಿಯರಾದ ಮೂರ್ತಿ ರಾವ್, ವಾಸುದೇವ, ಹುಚ್ಚಾಚಾರ್, ಅನಂತ ಜೋಷಿ ಹಾಜರಿದ್ದರು.