SK Home Ad
Home ನಮ್ಮ ಜಿಲ್ಲೆ ಕಲಬುರಗಿ ಮಧ್ವಾಚಾರ್ಯ ಜಯಂತಿ ಅಧಿಕೃತ ಆಚರಣೆಗೆ ಆಗ್ರಹ : ಕಲಬುರಗಿಯಲ್ಲಿ ಸಿಎಂ ಡಿಕೆ ಶಿವಕುಮಾರ್‌ಗೆ ಮನವಿ

ಮಧ್ವಾಚಾರ್ಯ ಜಯಂತಿ ಅಧಿಕೃತ ಆಚರಣೆಗೆ ಆಗ್ರಹ : ಕಲಬುರಗಿಯಲ್ಲಿ ಸಿಎಂ ಡಿಕೆ ಶಿವಕುಮಾರ್‌ಗೆ ಮನವಿ

0
198
ಕಲ್ಯಾಣ ಕರ್ನಾಟಕ: ಮಧ್ವಾಚಾರ್ಯ ಜಯಂತಿ ರಾಜ್ಯ ಮಟ್ಟದಲ್ಲಿ ಆಚರಿಸಲು ಬ್ರಾಹ್ಮಣ ಸಂಘದ ಮನವಿ

ಕಲಬುರಗಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸುವಂತೆ ಜಿಲ್ಲಾ ಬ್ರಾಹ್ಮಣ ಸಂಘದ ಪ್ರಮುಖರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಲಬುರಗಿಯ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಬ್ರಾಹ್ಮಣ ಸಮಾಜದ ನಿಯೋಗವು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿತು. ಮಧ್ವಾಚಾರ್ಯರು ಭಾರತೀಯ ಸನಾತನ ಧರ್ಮ, ತತ್ತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ.

ದ್ವೈತ ಸಿದ್ಧಾಂತದ ಮೂಲಕ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರೀಯ ಕ್ಷೇತ್ರದಲ್ಲಿ ಮಧ್ವಾಚಾರ್ಯರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ವಿಚಾರಧಾರೆ ಹಾಗೂ ಆದರ್ಶಗಳನ್ನು ಮಧ್ವ ಪರಂಪರೆಯ ಆಚಾರ್ಯರು, ಮಠಾಧೀಶರು ಮತ್ತು ಭಕ್ತರು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರ ಪರಂಪರೆಯು ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಚಿಂತನೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿಯೂ ಪಾತ್ರ ವಹಿಸುತ್ತಿದೆ ಎಂದು ಮುಖಂಡರು ಮನವಿಯಲ್ಲಿ ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿವರ್ಷ ವಿಜಯದಶಮಿ ದಿನ ಆಚರಿಸಲಾಗುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜಯಂತಿಯ ಅಂಗವಾಗಿ ಸರ್ಕಾರದ ವತಿಯಿಂದ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಿ, ಮಧ್ವಾಚಾರ್ಯರ ಜೀವನ, ತತ್ತ್ವಶಾಸ್ತ್ರ ಹಾಗೂ ಕೊಡುಗೆಗಳ ಕುರಿತು ವಿಚಾರ ಸಂಕಿರಣ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಮೂಲಕ ಮಧ್ವಾಚಾರ್ಯರ ವಿಚಾರಧಾರೆ ಮತ್ತು ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಈ ಕುರಿತು ಸಂಬಂಧಿಸಿದ ಇಲಾಖೆಗೆ ಅಗತ್ಯ ನಿರ್ದೇಶನ ನೀಡಿ, ಮಧ್ವಾಚಾರ್ಯ ಜಯಂತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂ. ಡಾ. ಗುರುಮಧ್ವಾಚಾರ್ಯ ನವಲಿ, ಆನಂದತೀರ್ಥಾಚಾರ್ಯ ಜೋಶಿ, ಲಕ್ಷ್ಮಣಾಚಾರ್ಯ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಂಡುರಂಗ ದೇಶಮುಖ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಕೋರಳ್ಳಿ, ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಯುವ ಬಿಜೆಪಿ ಮುಖಂಡ ಶ್ರೀನಿವಾಸ್ ಜಿ. ದೇಸಾಯಿ, ರಘೂತ್ತಮ ಘಂಟಿ, ಭರತ ಕುಲಕರ್ಣಿ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.