Home Advertisement
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ-ಧಾರವಾಡ ಪೊಲೀಸರ ವಿರುದ್ಧ ಸ್ವಪಕ್ಷದ ಸರ್ಕಾರದ ಮೇಲೆಯೇ ಸಿಡಿದೆದ್ದ ಕಾಂಗ್ರೆಸ್ ಶಾಸಕ!

ಹುಬ್ಬಳ್ಳಿ-ಧಾರವಾಡ ಪೊಲೀಸರ ವಿರುದ್ಧ ಸ್ವಪಕ್ಷದ ಸರ್ಕಾರದ ಮೇಲೆಯೇ ಸಿಡಿದೆದ್ದ ಕಾಂಗ್ರೆಸ್ ಶಾಸಕ!

0
20

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕರು ಆಡಳಿತ ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕಿಸುವುದು ಸಹಜ. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಸ್ವತಃ ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ಪೊಲೀಸ್ ವ್ಯವಸ್ಥೆಯ ವಿರುದ್ಧ ಗಂಭೀರ ಆರೋಪ ಮಾಡಿರುವುದು ಭಾರಿ ಸಂಚಲನ ಮೂಡಿಸಿದೆ. ಅವಳಿ ನಗರದಲ್ಲಿ ಪೊಲೀಸರೇ ರಿಯಲ್ ಎಸ್ಟೇಟ್ ದಂಧೆಗಿಳಿದಿದ್ದಾರೆ ಎಂದು ಆರೋಪಿಸಿರುವ ಕೈ ಶಾಸಕ, ತಕ್ಷಣವೇ ಇಲ್ಲಿನ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಪೊಲೀಸರ ವರ್ತನೆಗೆ ಬೇಸತ್ತ ಶಾಸಕ ಪ್ರಸಾದ್ ಅಬ್ಬಯ್ಯ: ವ್ಯಾಪಾರದ ಕೇಂದ್ರವಾದ ಹುಬ್ಬಳ್ಳಿ ಹಾಗೂ ಶಿಕ್ಷಣ ಕಾಶಿ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಹಣಕ್ಕಾಗಿ ಅನ್ಯಾಯದ ಮಾರ್ಗ ಹಿಡಿದಿದ್ದಾರೆ ಎಂದು ಹುಬ್ಬಳ್ಳಿ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
“ಅವಳಿ ನಗರದ ಪೊಲೀಸ್ ಇಲಾಖೆಯಲ್ಲಿ ಯಾವುದೂ ಸರಿಯಿಲ್ಲ. ರೌಡಿಶೀಟರ್‌ಗಳಿಗೆ ಮತ್ತು ಅಕ್ರಮ ದಂಧೆಕೋರರಿಗೆ ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ಇಲ್ಲಿರುವ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಈ ಬಗ್ಗೆ ದೂರು ನೀಡುತ್ತೇನೆ,” ಎಂದು ಪ್ರಸಾದ್ ಅಬ್ಬಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆ ಬಳಿಕ ಭುಗಿಲೆದ್ದ ಆಕ್ರೋಶ: ಇತ್ತೀಚೆಗಷ್ಟೇ ಧಾರವಾಡದಲ್ಲಿ ಪೊಲೀಸರ ಕಿರುಕುಳ ಹಾಗೂ ಹಣದ ಬೇಡಿಕೆಗೆ ಬೇಸತ್ತು ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಪೊಲೀಸರ ಮೇಲಿನ ಜನಾಕ್ರೋಶ ಮತ್ತಷ್ಟು ಹೆಚ್ಚಾಗಿದೆ.
ಅವಳಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಅಕ್ಕಿ ಸಾಗಾಟ ಹಾಗೂ ಡ್ರಗ್ಸ್ ದಂಧೆಗಳು ಪೊಲೀಸರ ಕಣ್ಮುಂದೆಯೇ ನಡೆಯುತ್ತಿದ್ದರೂ ಯಾವುದೇ ಕಠಿಣ ಕ್ರಮ ಜರುಗಿಸುತ್ತಿಲ್ಲ. ನ್ಯಾಯ ಕೇಳಿ ಠಾಣೆ ಮೆಟ್ಟಿಲೇರುವ ಅಮಾಯಕರ ಬಳಿಯೇ ಲಂಚ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳಿದ್ದರೂ, ಭ್ರಷ್ಟರ ಹಾವಳಿಯಿಂದಾಗಿ ಇಡೀ ಇಲಾಖೆಗೆ ಕಳಂಕ ಅಂಟಿದೆ.
ಇದೀಗ ಸ್ವತಃ ಆಡಳಿತ ಪಕ್ಷದ ಶಾಸಕರೇ ಭ್ರಷ್ಟ ಪೊಲೀಸರ ವಿರುದ್ಧ ಸಮರ ಸಾರಿದ್ದಾರೆ. ಗೃಹ ಇಲಾಖೆಯು ಶಾಸಕರ ಈ ಕೂಗಿಗೆ ಬೆಲೆ ಕೊಟ್ಟು, ಹುಬ್ಬಳ್ಳಿ-ಧಾರವಾಡದ ಪೊಲೀಸ್ ಅಧಿಕಾರಿಗಳಿಗೆ ಗೇಟ್‌ಪಾಸ್ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.