SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಅನಾಥ ಮಗುವನ್ನು ದತ್ತು ಪಡೆದ ಇಟಲಿ ದಂಪತಿ

ಅನಾಥ ಮಗುವನ್ನು ದತ್ತು ಪಡೆದ ಇಟಲಿ ದಂಪತಿ

0
89

ದಾವಣಗೆರೆ: ಜಿಲ್ಲೆಯ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಹೊಸ ಬದುಕಿನ ದಾರಿಯನ್ನು ತೆರೆದಿರುವ ಅಪರೂಪದ ಬೆಳವಣಿಗೆಯೊಂದರಲ್ಲಿ, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ಅಮೆರಿಕಾ, ಇಂಗ್ಲೆಂಡ್ ಹಾಗೂ ಇಟಲಿ ಸೇರಿದಂತೆ ವಿವಿಧ ದೇಶಗಳ ದಂಪತಿಯ ಮಡಿಲು ಸೇರಲು ಸಜ್ಜಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕೃತ ಪ್ರಕ್ರಿಯೆಯಲ್ಲಿ ಒಂದು ವರ್ಷದ ಅನಾಥ ಗಂಡು ಮಗುವನ್ನು ಇಟಲಿಯ ದಂಪತಿ ಕಾನೂನುಬದ್ಧವಾಗಿ ದತ್ತು ಸ್ವೀಕರಿಸಿದರು.

ಇಟಲಿಯ ವೈರಿ ಹಾಗೂ ಪ್ರಿಯಾ ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ. ಪ್ರಿಯಾ ಅವರು ಮೂಲತಃ ಚೆನ್ನೈ ಮೂಲದವರಾಗಿದ್ದು, ಇಟಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಹಲವು ವರ್ಷಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ಇದೀಗ ಪೋಷಕರಾಗುವ ಕನಸು ನನಸಾಗಿದೆ.

ಕೇಂದ್ರ ಸರ್ಕಾರದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ, ದಂಪತಿ 2023ರಲ್ಲೇ ಆನ್‌ಲೈನ್ ಮೂಲಕ ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅಗತ್ಯ ದಾಖಲೆಗಳ ಪರಿಶೀಲನೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ದೀರ್ಘಕಾಲದ ಕಾಯುವಿಕೆಯ ನಂತರ ಸೋಮವಾರ ಮಗುವನ್ನು ಅಧಿಕೃತವಾಗಿ ದತ್ತು ಪಡೆದರು.

ಜಿಲ್ಲಾಡಳಿತದ ಸಮ್ಮುಖದಲ್ಲಿ ನಡೆದ ಈ ಪ್ರಕ್ರಿಯೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮಗುವಿನ ಉತ್ತಮ ಭವಿಷ್ಯ ಹಾಗೂ ಆರೈಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಿ ದತ್ತು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ಜಿಲ್ಲೆಯಲ್ಲಿ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಕುಟುಂಬದ ವಾತ್ಸಲ್ಯ ದೊರಕಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ದತ್ತು ಪ್ರಕ್ರಿಯೆಗಳು ಆಶಾದಾಯಕ ಬೆಳವಣಿಗೆಯಾಗಿದ್ದು, ಇನ್ನೂ ಹಲವು ಮಕ್ಕಳಿಗೆ ಉತ್ತಮ ಭವಿಷ್ಯದ ಅವಕಾಶಗಳು ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.