SK Home Ad
Home ನಮ್ಮ ಜಿಲ್ಲೆ ಬೆಂಗಳೂರು 1ನೇ ತರಗತಿಗೆ ವಯೋಮಿತಿ ಸಡಿಲಿಕೆ: ಹೈಕೋರ್ಟ್ ಸೂಚನೆ

1ನೇ ತರಗತಿಗೆ ವಯೋಮಿತಿ ಸಡಿಲಿಕೆ: ಹೈಕೋರ್ಟ್ ಸೂಚನೆ

0
182

ಬೆಂಗಳೂರು: 1ನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ ವಯೋಮಿತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಶಾಲಾ ಪ್ರವೇಶದಲ್ಲಿ ಮಕ್ಕಳಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಪರಿಗಣಿಸಿ, ವಯೋಮಿತಿ ಸಡಿಲಿಕೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

ಮುಂಬರುವ 2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಿಲಿಕೆ ವಿಚಾರವನ್ನು ಮರುಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಆದೇಶ ಹೊರಡಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಸ್ತುತ ನಿಯಮಾವಳಿಗಳ ಪ್ರಕಾರ, 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ನಿಗದಿತ ವಯಸ್ಸು ಕಡ್ಡಾಯವಾಗಿದೆ. ಆದರೆ ಕೆಲ ತಿಂಗಳ ಅಂತರದಿಂದ ಅನೇಕ ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಬೆಂಗಳೂರಿನ ಮಾಸ್ಟರ್ ಕೃಷ್ಣ ಗಣೇಶ್ ಸೇರಿ 6 ಮಂದಿ ವಿದ್ಯಾರ್ಥಿಗಳು ಹಾಗೂ ಅವರ ಪರವಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ.

ವಯೋಮಿತಿ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಎದುರಿಸುತ್ತಿದ್ದು, ಈ ಸಂಬಂಧ ಒಂದು ವಾರದೊಳಗೆ ಎಲ್ಲಾ ಆಯಾಮಗಳಲ್ಲೂ ಪರಿಶೀಲಿಸಿ ಆದೇಶ ಹೊರಡಿಸುವಂತೆ ಸೂಚನೆ ನೀಡಿದೆ.