TCS ತಾಂತ್ರಿಕ ಸಮಸ್ಯೆ: ದೆಹಲಿ, ಬೆಂಗಳೂರು ಸೇರಿ ಹಲವು ಕೇಂದ್ರಗಳಲ್ಲಿ CUET ಬೆಳಗಿನ ಪಾಳಿ ಪರೀಕ್ಷೆ ವಿಳಂಬ, ಮಧ್ಯಾಹ್ನದ ಪಾಳಿಗೆ ಹೊಸ ವೇಳಾಪಟ್ಟಿ
ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG 2026) ಶನಿವಾರ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅಸ್ತವ್ಯಸ್ತಗೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದ ಪರಿಣಾಮ ದೆಹಲಿ, ಅಂಬಾಲಾ, ವಾರಣಾಸಿ ಹಾಗೂ ಬೆಂಗಳೂರು ಸೇರಿದಂತೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ ಪಾಳಿಯ ಪರೀಕ್ಷೆ ಎರಡು ಗಂಟೆಗಳಿಗೂ ಅಧಿಕ ಕಾಲ ವಿಳಂಬವಾಗಿ ಆರಂಭವಾಯಿತು.
ಮೂಲ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಪರೀಕ್ಷೆ ಆರಂಭವಾಗಬೇಕಾಗಿದ್ದರೂ, ಸರ್ವರ್ ಹಾಗೂ ತಾಂತ್ರಿಕ ಸಂಪರ್ಕ ಸಮಸ್ಯೆಗಳ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಹೊರಗೆ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾದರು.
NTA ಸ್ಪಷ್ಟನೆ : ಪರೀಕ್ಷೆಯನ್ನು ನಡೆಸುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಕುರಿತು ಸ್ಪಷ್ಟನೆ ನೀಡಿದ್ದು, TCS ತಾಂತ್ರಿಕ ದೋಷದಿಂದ ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯ ಆರಂಭ ವಿಳಂಬವಾಗಿದೆ ಎಂದು ತಿಳಿಸಿದೆ. ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಲಾಗಿದ್ದು, ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಪೂರ್ಣ ಪರೀಕ್ಷಾ ಸಮಯ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.
“ಬೆಳಗಿನ ಪಾಳಿಯ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯ ಸಂಪೂರ್ಣ ಅವಧಿಯನ್ನು ನೀಡಲಾಗುತ್ತಿದೆ. ಪರೀಕ್ಷೆ ಪೂರ್ಣಗೊಳಿಸಿದ ಬಳಿಕವೇ ಅಭ್ಯರ್ಥಿಗಳು ಕೇಂದ್ರದಿಂದ ನಿರ್ಗಮಿಸಲು ಅವಕಾಶ ನೀಡಲಾಗುತ್ತದೆ” ಎಂದು NTA ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಾಹ್ನದ ಪಾಳಿಯ ವೇಳಾಪಟ್ಟಿ ಬದಲಾವಣೆ : ಬೆಳಗಿನ ಪಾಳಿಯ ವಿಳಂಬದ ಪರಿಣಾಮ ಮಧ್ಯಾಹ್ನದ ಪಾಳಿಯ ಪರೀಕ್ಷಾ ವೇಳೆಯನ್ನೂ ಪರಿಷ್ಕರಿಸಲಾಗಿದೆ.

ಹೊಸ ವೇಳಾಪಟ್ಟಿ: ಬೆಳಗಿನ ಪಾಳಿ ಪರೀಕ್ಷೆ ವಿಳಂಬವಾಗಿದ್ದು, ಮಧ್ಯಾಹ್ನದ ಪಾಳಿಗೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ್ಪದು ಪರೀಕ್ಷೆ ಮದ್ಯಾಹ್ನ 4 ಗಂಟೆಗೆ ಆರಂಭವಾಗಲಿದೆ ಈ ಹಿಂದೆ ಪರೀಕ್ಷೆ ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ : ಪರೀಕ್ಷಾ ಕೇಂದ್ರಗಳ ಹೊರಗೆ ಕಾಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಪರೀಕ್ಷಾ ನಿರ್ವಹಣೆಯ ವೈಫಲ್ಯವನ್ನು ಪ್ರಶ್ನಿಸಿದರೆ, ಇನ್ನೂ ಕೆಲವರು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಒತ್ತಾಯಿಸಿದರು.
ಅತಿಶಿ ಟೀಕೆ : ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಅತಿಶಿ ಮರ್ಲೆನಾ ಕೇಂದ್ರ ಶಿಕ್ಷಣ ಸಚಿವರನ್ನು ಟೀಕಿಸಿದ್ದು, “ಮೊದಲು NEET, ನಂತರ CBSE, ಈಗ CUET. ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಗಂಟೆಗಟ್ಟಲೆ ಕಾಯಿಸುವುದು ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಅಸಮರ್ಥತೆಯನ್ನು ತೋರಿಸುತ್ತದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
15 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು : ಈ ವರ್ಷದ CUET-UG ಪರೀಕ್ಷೆ ಮೇ 11ರಂದು ಆರಂಭಗೊಂಡಿದ್ದು, ಮೇ 31ರವರೆಗೆ ನಡೆಯಲಿದೆ. NTA ಮಾಹಿತಿ ಪ್ರಕಾರ, ಒಟ್ಟು 15,68,866 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 21 ದಿನಗಳ ಅವಧಿಯಲ್ಲಿ 35 ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ದೇಶದ 250ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆಗೆ ಪ್ರಮುಖವಾಗಿರುವ ಈ ಪರೀಕ್ಷೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.




















