SK Home Ad
Home ಸುದ್ದಿ ದೇಶ ಮುಂಬೈನಲ್ಲಿ ಮತ್ತೆ CNG ದರ ಏರಿಕೆ: ಪ್ರತಿ ಕೆಜಿಗೆ ₹2 ಹೆಚ್ಚಳ

ಮುಂಬೈನಲ್ಲಿ ಮತ್ತೆ CNG ದರ ಏರಿಕೆ: ಪ್ರತಿ ಕೆಜಿಗೆ ₹2 ಹೆಚ್ಚಳ

0
79

ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ಬೆಲೆ ಏರಿಕೆ; ಸಾರಿಗೆ ವೆಚ್ಚ ಹೆಚ್ಚಳದ ಆತಂಕ

ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಳಿತದ ನಡುವೆಯೇ ಇದೀಗ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆದಾರರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್ ಲಿಮಿಟೆಡ್ ಮುಂಬೈ, ಮಹಾನಗರ ಪ್ರದೇಶದಲ್ಲಿ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಿರುವುದಾಗಿ ಘೋಷಿಸಿದೆ.

ಪರಿಷ್ಕೃತ ದರದ ಪ್ರಕಾರ, ಮುಂಬೈನಲ್ಲಿ ಸಿಎನ್‌ಜಿ ಬೆಲೆ ಈಗ ₹86 ಪ್ರತಿ ಕೆಜಿಗೆ ಏರಿಕೆಯಾಗಿದೆ. ಇದೇ ವೇಳೆ ಗೃಹ ಬಳಕೆಯ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ದರವನ್ನು ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ತಿಂಗಳಲ್ಲೇ ಎರಡನೇ ಬಾರಿ ದರ ಏರಿಕೆ : ಮೇ ತಿಂಗಳಲ್ಲೇ ಇದು ಎರಡನೇ ಬಾರಿ ಸಿಎನ್‌ಜಿ ದರ ಹೆಚ್ಚಳವಾಗಿರುವುದು ಗಮನಾರ್ಹ. ಇದಕ್ಕೂ ಮೊದಲು ಮೇ 14ರಂದು ಮುಂಬೈ ವ್ಯಾಪ್ತಿಯಲ್ಲಿ ಸಿಎನ್‌ಜಿ ದರವನ್ನು ₹2 ಹೆಚ್ಚಿಸಲಾಗಿತ್ತು. ಬಳಿಕ ಮೇ 26ರಂದು ದೆಹಲಿಯಲ್ಲೂ ಪ್ರತಿ ಕೆಜಿಗೆ ₹2 ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದರ ಪರಿಷ್ಕರಣೆ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆ ಹೆಚ್ಚಿಸಲಾಗಿದೆ.

ಯಾವ ಪ್ರದೇಶಗಳಿಗೆ ಅನ್ವಯ? : ಹೊಸ ದರಗಳು ಮುಂಬೈ, ಥಾಣೆ, ನವಿ ಮುಂಬೈ ಹಾಗೂ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (MMR) ಇತರ ಭಾಗಗಳಿಗೆ ಅನ್ವಯವಾಗಲಿವೆ.

ಎಂಜಿಎಲ್ ಸಂಸ್ಥೆ ಮಹಾರಾಷ್ಟ್ರದ ವಿವಿಧ ನಗರಗಳ ಜೊತೆಗೆ ಕರ್ನಾಟಕದ ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ಹಲವು ಪ್ರದೇಶಗಳಿಗೂ ಅನಿಲ ಪೂರೈಕೆ ಮಾಡುತ್ತಿದೆ.

ವಾಹನ ಸವಾರರಿಗೆ ಹೆಚ್ಚುವರಿ ಹೊರೆ : ಸಿಎನ್‌ಜಿ ದರ ಏರಿಕೆಯ ನೇರ ಪರಿಣಾಮ ಆಟೋ ರಿಕ್ಷಾ, ಟ್ಯಾಕ್ಸಿ, ಶಾಲಾ ವಾಹನಗಳು, ಖಾಸಗಿ ಕಾರುಗಳು ಹಾಗೂ ವಾಣಿಜ್ಯ ಸಾರಿಗೆ ವಾಹನಗಳ ಮೇಲೆ ಬೀಳಲಿದೆ. ಇಂಧನ ವೆಚ್ಚ ಹೆಚ್ಚಳದಿಂದ ಚಾಲಕರ ಆದಾಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಈಗಾಗಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎನ್‌ಜಿ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಪ್ರಯಾಣ ದರ ಪರಿಷ್ಕರಣೆಯ ಅಗತ್ಯ ಎದುರಾಗಬಹುದು ಎಂದು ಎಚ್ಚರಿಸಿವೆ.

ಸರಕು ಸಾಗಣೆ ವೆಚ್ಚ ಹೆಚ್ಚಳ ಸಾಧ್ಯತೆ : ಸಿಎನ್‌ಜಿ ಬಳಸುವ ವಾಣಿಜ್ಯ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಾಗುವುದರಿಂದ ಸರಕು ಸಾಗಣೆ ದರಗಳ ಮೇಲೂ ಪರಿಣಾಮ ಬೀಳಬಹುದು. ಇದರಿಂದ ವಿವಿಧ ವಸ್ತುಗಳ ಮಾರುಕಟ್ಟೆ ಬೆಲೆಗಳ ಮೇಲೂ ಪರೋಕ್ಷ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ದರ ಏರಿಕೆಗಳಿಂದ ಸಾಮಾನ್ಯ ಗ್ರಾಹಕರು, ವಾಹನ ಸವಾರರು ಮತ್ತು ಸಣ್ಣ ಸಾರಿಗೆ ಉದ್ಯಮಿಗಳು ಹೆಚ್ಚುವರಿ ಆರ್ಥಿಕ ಒತ್ತಡವನ್ನು ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರಗಳ ಸ್ಥಿರತೆ ಬಗ್ಗೆ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ.