SK Home Ad
Home ಸುದ್ದಿ ವಿದೇಶ Byju’sಗೆ ಕಾನೂನು ಸಂಕಷ್ಟ : ಸಿಂಗಾಪುರ ಕೋರ್ಟ್‌ ಖಡಕ್‌ ಆದೇಶ

Byju’sಗೆ ಕಾನೂನು ಸಂಕಷ್ಟ : ಸಿಂಗಾಪುರ ಕೋರ್ಟ್‌ ಖಡಕ್‌ ಆದೇಶ

0
74

Byju’s ಸಂಸ್ಥಾಪಕ ಬೈಜು ರವೀಂದ್ರನ್‌ಗೆ ಸಿಂಗಾಪುರ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ

ಸಿಂಗಾಪುರ: ಭಾರತದ ಪ್ರಮುಖ ಎಡ್‌ಟೆಕ್ ಸಂಸ್ಥೆಯಾಗಿದ್ದ ಬೈಜುಸ್ (Byju’s) ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು, ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರಿಗೆ ಸಿಂಗಾಪುರ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ Qatar Holding LLC ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಮಹತ್ವದ ಆದೇಶ ಪ್ರಕಟಿಸಿದೆ.

ಒಪ್ಪಂದ ಉಲ್ಲಂಘನೆ, ಹೂಡಿಕೆದಾರರ ಹಣದ ದುರುಪಯೋಗ ಮತ್ತು ಆಸ್ತಿ ವಿವರಗಳನ್ನು ಮುಚ್ಚಿಟ್ಟ ಆರೋಪಗಳಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ, ಬೈಜು ರವೀಂದ್ರನ್ ನ್ಯಾಯಾಲಯದ ಆದೇಶಗಳನ್ನು ನಿರಂತರವಾಗಿ ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ ಕಠಿಣವಾಗಿ ಅಭಿಪ್ರಾಯಪಟ್ಟಿದೆ.

ಏಪ್ರಿಲ್ 2024ರಿಂದಲೇ ಆದೇಶ ಉಲ್ಲಂಘನೆ : ಪ್ರಕರಣದ ವಿಚಾರಣೆಯ ವೇಳೆ, ಬೈಜು ರವೀಂದ್ರನ್ ಅವರು ತಮ್ಮ ವೈಯಕ್ತಿಕ ಹಾಗೂ ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ಸಿಂಗಾಪುರ ನ್ಯಾಯಾಲಯವು ಹಲವು ಬಾರಿ ಸೂಚಿಸಿತ್ತು. ಆದರೆ ಏಪ್ರಿಲ್ 2024ರಿಂದ ನೀಡಲಾದ ಈ ಆದೇಶಗಳನ್ನು ಅವರು ಪಾಲಿಸದೆ ಬಂದಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಮಾಹಿತಿ ಮುಚ್ಚಿಡುವ ಮೂಲಕ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ ಎಂದು ಕಟುವಾಗಿ ಟೀಕಿಸಿದೆ. ಇದೇ ಹಿನ್ನೆಲೆಯಲ್ಲಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಬೈಜು ರವೀಂದ್ರನ್ ಅವರು ಯಾವುದೇ ನೆಪ ಹೇಳದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.

90 ಸಾವಿರ ಸಿಂಗಾಪುರ ಡಾಲರ್ ವೆಚ್ಚ ಪಾವತಿ ಆದೇಶ : ಜೈಲು ಶಿಕ್ಷೆಯ ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ವೆಚ್ಚಗಳಿಗಾಗಿ ಸುಮಾರು 90 ಸಾವಿರ ಸಿಂಗಾಪುರ ಡಾಲರ್‌ಗಳನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು ₹67.47 ಲಕ್ಷ ಎಂದು ಅಂದಾಜಿಸಲಾಗಿದೆ.

ಹೂಡಿಕೆದಾರರ ಹಣ ದುರುಪಯೋಗ ಆರೋಪ : ಬೈಜುಸ್ ಸಂಸ್ಥೆ ವಿರುದ್ಧ ಹಲವು ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ಜಾಗತಿಕ ಮಟ್ಟದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕಂಪನಿಗೆ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಹಾಗೂ ಆರ್ಥಿಕ ಮಾಹಿತಿಯನ್ನು ಸರಿಯಾಗಿ ಬಹಿರಂಗಪಡಿಸದಿರುವುದು ಪ್ರಮುಖ ಆರೋಪಗಳಾಗಿವೆ.

ಈ ಪ್ರಕರಣದಲ್ಲಿ ಹೂಡಿಕೆದಾರರ ಪರವಾಗಿ ಕತಾರ್ ಹೋಲ್ಡಿಂಗ್ ಎಲ್‌ಎಲ್‌ಸಿ ಕಾನೂನು ಹೋರಾಟ ಮುಂದುವರಿಸಿದ್ದು, ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.

ಅಮೆರಿಕದಲ್ಲೂ ಎದುರಾದ ಕಾನೂನು ಸಮಸ್ಯೆ : ಇದಕ್ಕೂ ಮೊದಲು ಅಮೆರಿಕದ ನ್ಯಾಯಾಲಯವೂ ಬೈಜು ರವೀಂದ್ರನ್ ವಿರುದ್ಧ ಕ್ರಮ ಕೈಗೊಂಡಿತ್ತು. ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಭಾರೀ ಮೊತ್ತದ ದಂಡ ವಿಧಿಸಲಾಗಿತ್ತು. ಇದೀಗ ಸಿಂಗಾಪುರ ನ್ಯಾಯಾಲಯದ ತೀರ್ಪಿನಿಂದ ಬೈಜುಸ್‌ನ ಜಾಗತಿಕ ಸಂಕಷ್ಟ ಮತ್ತಷ್ಟು ಗಂಭೀರಗೊಂಡಿದೆ.

ಭಾರತದಲ್ಲೂ ED ತನಿಖೆ : ಭಾರತದಲ್ಲಿ Enforcement Directorate (ED) ಕೂಡ ಬೈಜುಸ್ ವಿರುದ್ಧ ತನಿಖೆ ನಡೆಸುತ್ತಿದೆ. ವಿದೇಶಿ ಹೂಡಿಕೆ ಸ್ವೀಕರಿಸುವುದು ಮತ್ತು ವಿದೇಶಗಳಿಗೆ ಹಣ ವರ್ಗಾವಣೆ ಮಾಡುವ ವೇಳೆ ಸುಮಾರು ₹9,000 ಕೋಟಿಗೂ ಅಧಿಕ ಮೊತ್ತದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳಿವೆ. ಇದರ ಜೊತೆಗೆ, ಹೂಡಿಕೆದಾರರನ್ನು ಆಕರ್ಷಿಸಲು ಕಂಪನಿಯ ಆದಾಯದ ಬಗ್ಗೆ ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪವೂ ತನಿಖೆಯ ವ್ಯಾಪ್ತಿಗೆ ಬಂದಿದೆ.

ಭಾರತದ ಎಡ್‌ಟೆಕ್ ಕ್ಷೇತ್ರಕ್ಕೆ ದೊಡ್ಡ ಆಘಾತ : ಒಂದು ಕಾಲದಲ್ಲಿ ಭಾರತದ ಅತ್ಯಂತ ಮೌಲ್ಯಮಯ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿ ಬೆಳೆದಿದ್ದ ಬೈಜುಸ್, ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟ, ಸಾಲದ ಸಮಸ್ಯೆ, ಉದ್ಯೋಗ ಕಡಿತ ಮತ್ತು ಹೂಡಿಕೆದಾರರ ವಿವಾದಗಳಿಂದ ಸುದ್ದಿಯಲ್ಲಿದೆ. ಈಗ ಸಂಸ್ಥಾಪಕನ ವಿರುದ್ಧದ ಜೈಲು ಶಿಕ್ಷೆ ಪ್ರಕರಣವು ಕಂಪನಿಯ ಭವಿಷ್ಯದ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.