SK Home Ad
Home ಸುದ್ದಿ ದೇಶ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ತಳಮಳ: ದೆಹಲಿಯಲ್ಲಿಂದು ಸಿದ್ದರಾಮಯ್ಯ, ಡಿಕೆಶಿ ಮಹತ್ವದ ಸಭೆ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ತಳಮಳ: ದೆಹಲಿಯಲ್ಲಿಂದು ಸಿದ್ದರಾಮಯ್ಯ, ಡಿಕೆಶಿ ಮಹತ್ವದ ಸಭೆ

0
16

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಐಸಿಸಿ ವರಿಷ್ಠರು ದೆಹಲಿಗೆ ಬುಲಾವ್ ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಈ ಇಬ್ಬರು ಪ್ರಮುಖರ ಮಹತ್ವದ ಸಭೆ ನಡೆಯಲಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಹೊಸಬರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆ ಮಾಡಬೇಕು ಎಂಬ ಬೇಡಿಕೆ ಹಿರಿಯ-ಕಿರಿಯ ಶಾಸಕರಿಂದ ಕೇಳಿಬಂದಿದೆ. ಇದರ ನಡುವೆ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ರಾಜಕೀಯದ ಮಹತ್ವದ ವಿಚಾರಗಳ ಚರ್ಚೆಗೆ ಸಮಯ ಕೋರಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಈ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಕೇವಲ ಸಿಎಂ-ಡಿಸಿಎಂ ಮಾತ್ರವಲ್ಲದೆ, ಇಡೀ ಸಚಿವರ ದಂಡೇ ದೆಹಲಿಗೆ ದೌಡಾಯಿಸಿದೆ. ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಎಚ್.ಸಿ. ಮಹದೇವಪ್ಪ ಹಾಗೂ ಬೈರತಿ ಸುರೇಶ್ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿದ್ದಾರೆ. ಇವರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ 12ಕ್ಕೂ ಹೆಚ್ಚು ಶಾಸಕರು ದೆಹಲಿ ತಲುಪಿರುವುದು ಸಭೆಯ ಗಾಂಭೀರ್ಯವನ್ನು ಹೆಚ್ಚಿಸಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸಿಎಂ ಬದಲಾವಣೆ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಅಲ್ಲದೆ… “2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಹಾಗೂ ಇದೇ ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬರಲಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯುವ ಕನಸು ಕಾಣುವುದನ್ನು ಬಿಡಲಿ” ಎಂದು ಸವಾಲು ಹಾಕಿದ್ದಾರೆ. ಒಟ್ಟಾರೆಯಾಗಿ ಮಂಗಳವಾರ ನಡೆಯಲಿರುವ ದೆಹಲಿ ಸಭೆಯು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸಲಿದೆ.