SK Home Ad
Home ಸುದ್ದಿ ದೇಶ NTA ಮಹತ್ವದ ಪ್ರಕಟಣೆ: CUET UG 2026 ಪರೀಕ್ಷೆ ಮುಂದೂಡಿಕೆ

NTA ಮಹತ್ವದ ಪ್ರಕಟಣೆ: CUET UG 2026 ಪರೀಕ್ಷೆ ಮುಂದೂಡಿಕೆ

0
57

ಬಕ್ರೀದ್ ದಿನಾಂಕ ಪರಿಷ್ಕರಣೆ ಬಳಿಕ CUET UG ಪರೀಕ್ಷೆ ಮುಂದೂಡಿಕೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೇ 28ರಂದು ನಡೆಯಬೇಕಿದ್ದ CUET UG ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (Common University Entrance Test Undergraduate) 2026 ಪರೀಕ್ಷೆಯನ್ನು ಮುಂದೂಡಿದೆ. ಈದ್-ಉಲ್-ಜುಹಾ (ಬಕ್ರೀದ್) ಸರ್ಕಾರಿ ರಜೆಯ ದಿನಾಂಕ ಪರಿಷ್ಕೃತಗೊಂಡ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ.

NTA ಭಾನುವಾರ ರಾತ್ರಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮೇ 28ರಂದು ಎರಡು ಶಿಫ್ಟ್‌ಗಳಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳೂ ಮುಂದೂಡಲ್ಪಟ್ಟಿವೆ ಎಂದು ತಿಳಿಸಿದೆ. ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು CUET UG ಪರೀಕ್ಷೆಗೆ ಹಾಜರಾಗುತ್ತಿರುವ ಹಿನ್ನೆಲೆ, ಬಕ್ರೀದ್ ಹಬ್ಬ ಮತ್ತು ಪರೀಕ್ಷೆ ಒಂದೇ ದಿನ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಗಳ ಬಗ್ಗೆ ಹಲವು ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿತ್ತು. ವಿಶೇಷವಾಗಿ Students Islamic Organisation of India (SIO) ಪರೀಕ್ಷೆ ಮುಂದೂಡಬೇಕೆಂದು NTAಗೆ ಮನವಿ ಮಾಡಿತ್ತು.

CUET UG ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದ್ದು, ದೇಶದ ಅನೇಕ ಕೇಂದ್ರ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಈ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಹೀಗಾಗಿ ಪರೀಕ್ಷೆಯ ದಿನಾಂಕ ಬದಲಾವಣೆ ಸಾವಿರಾರು ಅಭ್ಯರ್ಥಿಗಳ ವೇಳಾಪಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದಲ್ಲದೆ, ಬಾಧಿತ ಅಭ್ಯರ್ಥಿಗಳು ಯಾವುದೇ ಪ್ರಶ್ನೆ ಅಥವಾ ಸ್ಪಷ್ಟೀಕರಣಕ್ಕಾಗಿ NTA ಸಹಾಯವಾಣಿ 011-40759000 ಅನ್ನು ಸಂಪರ್ಕಿಸಬಹುದು. ಜೊತೆಗೆ cuet-ug@nta.ac.in ಗೆ ಇಮೇಲ್ ಮಾಡುವ ಅವಕಾಶವೂ ನೀಡಲಾಗಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಹಾಗೂ NTA ಪ್ರಕಟಣೆಗಳನ್ನು ನಿರಂತರವಾಗಿ ಗಮನಿಸುವಂತೆ ಸೂಚಿಸಲಾಗಿದೆ.