ಐತಿಹಾಸಿಕ ಲಕ್ಕುಂಡಿಯಲ್ಲಿರುವ ಬಾವಿ ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ ನ್ಯಾಸ್ ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಆನಾವರಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವಿಧಾನಸೌಧದಲ್ಲಿ ಬುಧವಾರ ಲಕ್ಕುಂಡಿ ಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಹೊರತರುವ ಸಲುವಾಗಿ ನ್ಯಾಸ್ ಸಂಸ್ಥೆ ವಿಜ್ಞಾನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಈಗಾಗಲೇ 2023ರಿಂದ ಲಕ್ಕುಂಡಿಯಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ 7 ಇತರೆ ಸ್ಮಾರಕಗಳನ್ನು ಒಳಗೊಂಡಂತೆ ಒಟ್ಟು 70ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಮುಂಬರುವ ಡಿಸೆಂಬರ್ 31ರೊಳೆಗೆ ಲಕ್ಕುಂಡಿಯಲ್ಲಿ 101 ಬಾವಿ 101 ದೇವಾಲಯಗಳನ್ನು ನ್ಯಾಸ್ ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೆ ಆನಾವರಣಗೊಳಿಸಲು ಅಗತ್ಯ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಲಕ್ಕುಂಡಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೋ) ಸೇರಿಸಲು ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಯುನೆಸ್ಕೋ ಪಟ್ಟಿಗೆ ಸೇರಿಸಲು 2024ರ ನವಂಬರ್‌ನಲ್ಲಿ ಪ್ರಾಚ್ಯಾವಶೇಷಗಳ ಆನ್ವೇಷಣೆ ಭಾಗ-Iನ್ನು ನಡೆಸಿ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಲಾಗಿದೆ. 2026ರ ಮೇ 2ರಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-2 ನಡೆಸುತ್ತಿದ್ದು, ಈಗಾಗಲೇ ಎರಡನೇ ಹಂತದಲ್ಲಿ I800ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿವೆ. ಎರಡೂ ಹಂತಗಳ ಪ್ರಾಚ್ಯಾವಶೇಷಗಳನ್ನು ಸೇರಿಸಿ ಜೂನ್ 30ರ ಒಳಗಾಗಿ ದಾಖಲೆಯ ರೀತಿಯ 5000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಿ ಅವುಗಳನ್ನು ಬಯಲು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು ಎಂದರು.
ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಫೆಬ್ರವರಿಯಲ್ಲಿ ಪಂಚ ದೇವಾಲಯ ಮತ್ತು ಪಂಜೆ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ 2ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದೆ. 10 ಕೋಟಿ ರೂ. ವೆಚ್ಚದಲ್ಲಿ 6 ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲಾಗುವುದು. 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 10ಕ್ಕಿಂತ ಹೆಚ್ಚು ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲಾಗುವುದು. ಒಟ್ಟಾರೆಯಾಗಿ ಲಕ್ಕುಂಡಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಕಾರ್ಯಕ್ಕೆ ಹಾಗೂ ಯುನೆಸ್ಕೋ ಪಟ್ಟಿಗೆ ಸೇರಿಸಲು ಮತ್ತಷ್ಟು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣ ಕುಮಾರ್ ಮಾತನಾಡಿ, ಲಕ್ಕುಂಡಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವುದು ಅಗತ್ಯವಾಗಿದೆ. ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಲಕ್ಕುಂಡಿಯಲ್ಲಿರುವ 101 ಭಾವಿ ಹಾಗೂ 101 ದೇವಾಲಯಗಳನ್ನು ಅನಾವರಣಗೊಳಿಸುವ ಪ್ರಯತ್ನಕ್ಕೆ ಕೈಜೋಡಿಸಲಾಗುವುದು ಎಂದು. ತಿಳಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ್, ಪ್ರಾಧಿಕಾರದ ಆಯುಕ್ತ ಡಾ.ಶರಣು ಗೋಗೇರಿ ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ.ತ್ರಿಲೋಕಚಂದ್ರ ಆಯುಕ್ತ ಅಕ್ರಂ ಪಾಷಾ, ಇಸ್ರೋ ವಿಜ್ಞಾನಿ ಪ್ರೊ. ರಾಮನಗೌಡ ನಾಡಗೌಡರ ಪಾಲ್ಗೊಂಡಿದ್ದರು.






















