Home Advertisement
Home ಅಂಕಣ ಜಿರಲೆಗಳ.. ಆನೆಗಳ.. ಬೀದಿನಾಯಿಗಳ ಕಾಲ.. 

ಜಿರಲೆಗಳ.. ಆನೆಗಳ.. ಬೀದಿನಾಯಿಗಳ ಕಾಲ.. 

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಜಿರಲೆ, ಆನೆ ಮತ್ತು ಬೀದಿ ನಾಯಿ ಕಾಟ…
ಇವೇ ಕಳೆದೊಂದು ವಾರದಿಂದ ದೇಶಾದ್ಯಂತ ಇವು ಸುದ್ದಿ ಮಾಡುತ್ತಿವೆ. ಹಾಗೇ ವ್ಯವಸ್ಥೆಯನ್ನು `ಪರಿವರ್ತಿಸುವ’ ಜಿಜ್ಞಾಸೆ ಹುಟ್ಟಿಸಿವೆ!

ಮೂರು ಘಟನೆಗಳು ಪ್ರತ್ಯೇಕ.. ಆದರೆ ಹುಟ್ಟಿಸಿರುವ ಚರ್ಚೆ ಹಾಗೂ ಕುತೂಹಲ ಅಸಮಾನ್ಯ. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ನ್ಯಾಯವಾದಿಗಳ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ `ಸಮಾಜದಲ್ಲಿ ಈಗಾಗಲೇ ವ್ಯವಸ್ಥೆಯಿಂದ ಸೃಷ್ಟಿಯಾಗಿರುವ ಪರಾವಲಂಬಿಗಳಿವೆ. ಉದ್ಯೋಗದ ಕೊರತೆ ಮತ್ತು ವೃತ್ತಿಯಲ್ಲಿ ಸ್ಥಾನ ಪಡೆಯುವ ಅಸಮರ್ಥತೆಯಿಂದಾಗಿ ಕೆಲ ಯುವಕರು ಎಲ್ಲೆಡೆ ಜಿರಲೆಗಳಂತೆ (ಕಾಕ್ರೋಚ್) ಹರಿದಾಡುತ್ತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳನ್ನು ಸೇರುತ್ತಿದ್ದಾರೆ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಿದ್ದಾರೆ. ಇಂಥವರು ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಿದ್ದಾರೆ’ ಎಂದು ತೆರೆದ ನ್ಯಾಯಾಲಯದಲ್ಲಿ ಆಡಿರುವ ಮಾತು ಈಗ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ.

ಸಿಜೆಐ ಈ ಮಾತು ಅಗತ್ಯವೋ ಅನಗತ್ಯವೋ, ಇದರ ಔಚಿತ್ಯ, ಇದು ಎಷ್ಟು ಪ್ರಮಾಣದಲ್ಲಿ ಲಘು ಅಥವಾ ಬಿಗಿ ಎನ್ನುವ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅವರೇ, ಟೀಕಿಸಿರುವ ಸಾಮಾಜಿಕ ಮಾಧ್ಯಮ ವಲಯ ಆಕ್ಷೇಪ ವ್ಯಕ್ತವಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಅನಿಸಿಕೆಗಿಂತ ಆ ನಂತರದ ಟೀಕೆ ಟಿಪ್ಪಣಿಗಳೇ ಮಹತ್ವ ಪಡೆದುಕೊಂಡಿವೆ!

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ತಮ್ಮ ಜಿರಲೆ' ಹೇಳಿಕೆಗೆ ಸ್ಪಷ್ಟೀಕರಣವನ್ನು ನೀಡಿದರು.ಒಂದು ಕ್ಷುಲ್ಲಕ ಪ್ರಕರಣದ ಸಂದರ್ಭದಲ್ಲಿ ಮೌಖಿಕ ಅನಿಸಿಕೆಯನ್ನು ಕೆಲ ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿದ್ದು ನೋವು ತಂದಿದೆ. ತಮ್ಮ ಹೇಳಿಕೆ ನಿರ್ದಿಷ್ಟವಾದ ನಕಲಿ ಮತ್ತು ಮೋಸಯುಕ್ತ ಪದವಿಗಳ ಮೂಲಕ ಕಾನೂನು ವೃತ್ತಿಯನ್ನು ಪ್ರವೇಶಿಸುತ್ತಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿತ್ತು’ ಹಾಗೇ, `ನಮ್ಮ ದೇಶದ ಪ್ರಸ್ತುತ ಮಾನವ ಸಂಪನ್ಮೂಲ, ಯುವಕರ ಬಗ್ಗೆ ವಿಶ್ವಾಸ ಮತ್ತು ಅವರನ್ನು ಅಭಿವೃದ್ಧಿ ಹೊಂದಿದ ಭಾರತದ ಆಧಾರ ಸ್ತಂಭಗಳನ್ನಾಗಿ ನೋಡುತ್ತೇನೆ’ ಎಂದೂ ಹೇಳಿದರು.

ಜಿರಲೆ' ವಿಷಯ ಪ್ರಾಮುಖ್ಯತೆ ಪಡೆಯಲು ಕಾರಣ, ಮಾಧ್ಯಮಗಳೂ ಕೂಡ ಇಂತಹ ಅವಕಾಶಕ್ಕೆ ಕಾಯುತ್ತಿದ್ದವೇನೋ.. ಆರ್‌ಟಿಐ ಕಾರ್ಯಕರ್ತರು ಹಾಗೂ ಪತ್ರಕರ್ತರ ಸೋಗಿನಲ್ಲಿ ಬ್ಲಾಕ್‌ಮೇಲ್ ಮಾಡುವವರು ಇಲ್ಲವೆಂದೇನಲ್ಲ. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಿದ ಪರಿಣಾಮಪೆಂಡುರಾ ಬಾಕ್ಸ್’ ಅನ್ನು ತೆರೆದಂತೆಯೂ ಆಯಿತು. ನ್ಯಾಯಾಂಗ ವ್ಯವಸ್ಥೆಯೊಳಗೆ ನುಸುಳಿರುವ ಭ್ರಷ್ಟಾಚಾರ, ಅಕ್ರಮಗಳು, ರಾಜಕಾರಣಿಗಳ ಜೊತೆಗಿನ ಸಂಬಂಧ ಇತ್ಯಾದಿಗಳ ಕುರಿತು ಪುಂಖಾನುಪುಂಖವಾಗಿ ಪ್ರಶ್ನೆ ಎದ್ದವು. ನಿವೃತ್ತಗೊಂಡ ನ್ಯಾಯಾಧೀಶರುಗಳು ರಾಜ್ಯಸಭಾ ಸದಸ್ಯರು, ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು, ರಾಜ್ಯಪಾಲರುಗಳು, ಸರ್ಕಾರದ ಕೃಪಾಶೀರ್ವಾದದ ಸ್ಥಾನಮಾನಗಳನ್ನು ಪಡೆದಿರುವುದರ ಮೊನಚು ಬಾಣ ಬಿರಿಸು ತೂರಿಬಂದವು..

ಹಾಗೇ ಯಾರ ಪಾತ್ರ ಹೆಚ್ಚು? ಎಂಬ ಮೇಲಾಟ ಕೂಡ ಶುರುವಾಗಿದೆ. 2005ರ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಈ ದೇಶದಲ್ಲಿ ನೂರಾರು ಆರ್‌ಟಿಐ ಕಾರ್ಯಕರ್ತರು ಬಲಿಯಾಗಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವ ಅನೇಕ ಪತ್ರಕರ್ತರು ಬೀದಿಪಾಲಾಗಿದ್ದಾರೆ. ಮಾಧ್ಯಮ ಮತ್ತು ಆರ್‌ಟಿಐ ಈ ದೇಶದ ಹತ್ತು ಹಲವು ಬೃಹತ್ ಹಗರಣಗಳನ್ನು ಬಯಲಿಗೆ ಎಳೆದಿವೆ. ಅಕ್ರಮಗಳನ್ನು ನಡೆಸಿದ ಹಲವರು ಜೈಲು ಪಾಲಾಗಿದ್ದಾರೆ. ಇತ್ತೀಚೆಗಷ್ಟೇ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಮನೆಯಲ್ಲಿ ಹದಿನೈದು ಕೋಟಿಗೂ ಅಧಿಕ ಹಣ ಪತ್ತೆಯಾದದ್ದು, ಎನ್‌ಸಿಇಆರ್‌ಟಿ ಪಠ್ಯ ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪ್ರಸ್ತಾಪವಾಗಿದ್ದನ್ನು ಬಯಲಿಗೆ ಎಳೆದದ್ದು ಮಾಧ್ಯಮ ಮತ್ತು ಆರ್‌ಟಿಐ ಕಾರ್ಯಕರ್ತರೇ ಅಲ್ಲವೇ? ಆ ನಂತರವೇ ಅಲ್ಲವೇ, ಎನ್‌ಸಿಇಆರ್‌ಟಿಗೆ ನೊಟೀಸ್ ನೀಡಿ ಪಠ್ಯ ಪುಸ್ತಕದ ಆ ಭಾಗವನ್ನು ರದ್ದು ಮಾಡಿದ್ದು !?

ಉಚಿತವೋ, ಅನುಚಿತವೋ, ಆದರೆ ಮುಕ್ತ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳೇ ಜಿರಲೆ' ಹರಿಯಲು ಬಿಟ್ಟದ್ದು ಸಾಕಷ್ಟು ಟೀಕೆಗೆ ಒಳಗಾಗಿರುವುದಂತೂ ನಿಜ. ಇದೊಂದುಪರಿವರ್ತನೆ’ಯ ಹಾಗೂ `ಸುಧಾರಣೆ’ಯ ಕಾಲವೂ ಆದೀತು ಎನ್ನಬಹುದೇನೋ…! ಏಕೆಂದರೆ ಈಗಲೇ ಕಾಕ್ರೊಚ್ ಜನತಾ ಪಾರ್ಟಿಯೊಂದು ಸಾಮಾಜಿಕ ಜಾಲ ತಾಣದಲ್ಲಿ ಹುಟ್ಟಿಕೊಂಡಿದೆ. ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಒಂದೇ ದಿನದಲ್ಲಿ 4.20 ಲಕ್ಷ ಫಾಲೋವರ್ಸ್‌ ಸೇರ್ಪಡೆಯಾಗಿದ್ದಾರೆ.

ವಾರದ ಇನ್ನೊಂದು ಪ್ರಕರಣ ಮಾನವೀಯ ನೆಲೆಯದ್ದು. ಕೊಡಗು ಜಿಲ್ಲೆ ದುಬಾರೆ ಸಾಕಾನೆ ಕ್ಯಾಂಪ್‌ನಲ್ಲಿ ನಡೆದ ಘಟನೆ. ಮದವೇರಿದ ಆನೆಯೊಂದು ಮತ್ತೊಂದು ಆನೆಗೆ ತಿವಿದು ಕಾದಾಡಿದ ವೇಳೆ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಮಧ್ಯ ಸಿಲುಕಿ ಸಾವನ್ನಪ್ಪಿದರು. ಆಕೆಯ ಪತಿ ಎದುರೇ ನಡೆದ ದುರಂತವಿದು. ಆತ ಪತ್ನಿಯ ರಕ್ಷಣೆಗೆ ಧಾವಿಸಿದರೂ ರಕ್ಷಿಸಲಾಗದ ಅಸಹಾಯಕ ಸ್ಥಿತಿ ಇತ್ತು. ಈ ಘಟನೆ ಪ್ರವಾಸೋದ್ಯಮದ ಸ್ಥಿತಿಗತಿ, ಪ್ರವಾಸಿಗರ ರಕ್ಷಣೆ ಮತ್ತು ಪ್ರಾಣಿ-ಮನುಷ್ಯರ ಅರಿವಿನ ಅಂತರ, ಮಾನವ-ಪ್ರಾಣಿ ಸಂಘರ್ಷ ಎಲ್ಲವುಗಳ ಮೇಲೆ ಬೆಳಕು ಚೆಲ್ಲಿದೆ.

ಇಷ್ಟಕ್ಕೂ ಸರ್ಕಾರವೇನೋ ಪರಿಹಾರ ಕೊಡಬಹುದು. ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ವಿಶೇಷವಾಗಿ ಈ ರೀತಿಯ ಝೂ, ಪ್ರಾಣಿಗಳ ವಿಹಾರ ತಾಣ, ವನ್ಯಜೀವಿ ಧಾಮ, ಚಾರಣ ಮತ್ತು ಸಮುದ್ರ ತೀರ (ಬೀಚ್‌ಗಳು) ಇತ್ಯಾದಿಗಳಲ್ಲಿಯ ಸುರಕ್ಷತಾ ಮಟ್ಟ ಹೇಗಿರಬೇಕು? ಏನಿರಬೇಕು ಎನ್ನುವುದಕ್ಕೆ; ಪ್ರವಾಸಿಗರು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೂ ಕೂಡ ದುಬಾರೆ ಘಟನೆ ಎಚ್ಚರಿಕೆಯ ಪಾಠವಾಗಿದೆ.

ಸೆಲ್ಫಿಗಾಗಿ ತನ್ನ ಮಗನನ್ನೇ ತಂದೆಯೊಬ್ಬ ಬಲಿಕೊಟ್ಟ. ಇದು ಭಾರತದಲ್ಲಿ ಈಗಿನ ಈ ಸೆಲ್ಫಿ ಹುಚ್ಚು ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಸಾವಿರಾರು ಜೀವಗಳ ದುರಂತ ಅಂತ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆ. ಜಿರಲೆ, ಆನೆಯ ನಂತರ ಈಗ ಬೀದಿ ನಾಯಿಗಳ ಆಕ್ರಮಣ ದೇಶದಲ್ಲಿ ಸದ್ದು ಮಾಡುತ್ತಿದೆ… ಇವುಗಳ ಹಾವಳಿ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಿ ತಿಂಗಳುಗಳೇ ಆಗಿವೆ. ಇಡೀ ವಿಶ್ವದಲ್ಲಿ ರೇಬಿಸ್‌ಗೆ ಇನ್ನೂ ಪರಿಣಾಮಕಾರಿ ಔಷಧಿ ಇಲ್ಲ. ಸರ್ವೋಚ್ಛ ನ್ಯಾಯಾಲಯವೇ ಈ ಹಿಂದೆ 2001ರ ಪ್ರಾಣಿ ಜನನ ನಿಯಂತ್ರಣ ಕಾಯ್ದೆಯ ಅನುಸಾರ, ಬೀದಿ ನಾಯಿಗಳನ್ನು ಕೊಲ್ಲದೇ ಸಂತಾನ ಶಕ್ತಿ ಹರಣ ಶಸ್ತ್ರಕ್ರಿಯೆ ನಡೆಸಿ, ಆಯಾ ನಗರಸಭೆ- ಪುರಸಭೆಗಳು ಒಂದು ನಿರ್ದಿಷ್ಟ ಪ್ರದೇಶ ಗುರುತಿಸಿ ಅಲ್ಲಿ ಸಂರಕ್ಷಿಸಬೇಕು ಎಂದು ಆದೇಶ ನೀಡಿತ್ತು. ಬೀದಿ ನಾಯಿಗಳಿಂದ ಜನರಿಗೆ ರಕ್ಷಣೆ ನೀಡುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳದ್ದಾಗಿದ್ದರೆ, ಅವನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರದ್ದು ಎಂದು ಸುಪ್ರೀಂ ಕೋರ್ಟ್ 2025ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ಆದರೆ ನಾಯಿಗಳ ಬೊಗಳಾಟ, ಕಚ್ಚುವಿಕೆ ನಿಲ್ಲಲಿಲ್ಲ….

ಔಷಧಿ ಇಲ್ಲದ ರೇಬಿಸ್ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ, ಬೀದಿ ನಾಯಿಗಳ ಬೊಗಳುವಿಕೆ ಸಾರ್ವಜನಿಕರಿಗೆ ಹಿಂಸೆಯಾಗುತ್ತಿರುವಾಗ ಮುಂದೆನು? ಎನ್ನುವ ಪ್ರಶ್ನೆಗಳು ಎದ್ದಿದ್ದವು. ನಾಯಿಗಳನ್ನು ನಿಯಂತ್ರಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿರುವ ಮಾತು ಮಾತ್ರ ದೇಶದ ಯಾವ ಸ್ಥಳೀಯ ಸಂಸ್ಥೆ ಮತ್ತು ಸರ್ಕಾರಕ್ಕೂ ಅದೇಕೋ ಇನ್ನೂ ತಟ್ಟಿಯೇ ಇಲ್ಲ ! ಇದರ ನಡುವೆ ಕೋರ್ಟ್ ಸೂಚನೆಯ ನೆಪವನ್ನಿಟ್ಟುಕೊಂಡು ಬೀದಿ ನಾಯಿಗಳ ನಿಯಂತ್ರಣ ಹೆಸರಿನಲ್ಲಿ ಲಕ್ಷ ಲಕ್ಷ ರೂ. ಲೂಟಿಯಾಗುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆಯೊಂದೇ ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ನಾಯಿ ಆಹಾರದ ಖರ್ಚು ಹಾಕಿರುವುದು ಬೆಳಕಿಗೆ ಬಂದಿದೆ. ಈಗಿನ ಬೆಳವಣಿಗೆಯಲ್ಲಿ, ರೇಬಿಸ್ ಪೀಡಿತ ಉಗ್ರ ನಾಯಿಗಳನ್ನು ಸಾಯಿಸಲು ದಯಾ ಮರಣ ನೀಡುವ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿದೆ. ರೇಬಿಸ್‌ಯುಕ್ತ ಕ್ರೂರ ಬೀದಿ ನಾಯಿಗಳಿಂದ ಮಕ್ಕಳು, ವೃದ್ಧರು ಅಷ್ಟರ ಮಟ್ಟಿಗೆ ಸುರಕ್ಷಿತರಾಗುವ ಆದೇಶವಿದಾಗಿದ್ದು ಖಂಡಿತ ಸ್ವಾಗತಾರ್ಹ.

ಜಿರಲೆ, ಆನೆ, ಹುಚ್ಚು ನಾಯಿಯಿಂದಲೂ `ಪರಿವರ್ತನೆ’ಯ ಕಾಲ!